ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸ್ ಠಾಣೆಗೆ ಕರೆಸಿ ಆತನ ಮೇಲೆ ಠಾಣಾಧಿಕಾರಿ ಹಲ್ಲೆ ನಡೆಸಿದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಕಾರ್ಕಳ ತಾಲೂಕಿನ ಹಿರ್ಗಾನ ನಿವಾಸಿ ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದರು ಎಂದು ದೂರಲಾಗಿದೆ.
ರಾಧಾಕೃಷ್ಣ ಅವರ ಫೇಸ್ ಬುಕ್ ನ ಫೇಕ್ ಐಡಿಯ ಮುಖಾಂತರ 2020 ಆಗಸ್ಟ್ ನಲ್ಲಿ ಕಿಡಿಗೇಡಿಗಳು ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಇದರ ಬಗ್ಗೆ ಬೆಂಗಳೂರು ಉತ್ತರ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ 26-8-2020 ರಂದು ದೂರು ನೀಡಿದ್ದರು ಮತ್ತು ಪೊಲೀಸರ ಮನವಿಯ ಮೇರೆಗೆ ಮತ್ತೊಮ್ಮೆ 4-9-2020 ದೂರು ನೀಡಿದ್ದರು.
ಈ ಬಗ್ಗೆ ಪೊಲೀಸ್ ತನಿಖೆ ನಡೆಸಿ ಇವರ ಹೇಳಿಕೆ ಪಡೆಯಲಾಗಿತ್ತು ನಂತರ ಇವರು ಕೆಲಸ ಕಳೆದುಕೊಂಡು ಊರಿಗೆ ಮರಳಿದ್ದು, ಈ ಮಧ್ಯೆ ಏಪ್ರಿಲ್ ನಲ್ಲಿ ಹೃದಯಾಘಾತದಿಂದಾಗಿ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು.
ಕೆಲ ದಿನಗಳ ಹಿಂದೆ ಕಾರ್ಕಳ ನಗರ ಠಾಣೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಹೋದಾಗ ಠಾಣಾಧಿಕಾರಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗುರುವಾರ ಎಕಾಎಕಿ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿದ ಪರಿಣಾಮ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Click this button or press Ctrl+G to toggle between Kannada and English