ಮಂಗಳೂರು : ಗಾಜಿನ ಛಾವಣಿ ಮತ್ತು ವಿಶಾಲ ಗಾಜಿನ ಕಿಟಿಕಿ ಇರುವ ಮಂಗಳೂರು-ಯಶವಂತಪುರ ನಡುವೆ ಹಗಲು ಸಂಚರಿಸುವ ರೈಲಿನ ‘ವಿಸ್ಟಾಡೋಮ್’ ಬೋಗಿಗಳನ್ನು ಸೇವೆಗೆ ಭಾನುವಾರ ಬೆಳಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್‌ರ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾರ್ವಜನಿಕರು ಅನೇಕ ಬೇಡಿಕೆಗಳನ್ಬು ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾಮಗಾರಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಸಾಕಷ್ಟು ತ್ವರಿತವಾಗಿ ನಡೆಯುತ್ತಿದೆ ಎಂದು ಹೇಳಿದರು.
ಅಂದಹಾಗೆ, ಪ್ರತೀ ವಿಸ್ಟಾಡೋಮ ಬೋಗಿಯಲ್ಲಿ 44 ಮಂದಿ ಪ್ರಯಾಣಿಸಬಹುದಾಗಿದೆ. ಎರಡು ಬೋಗಿಯಲ್ಲಿ 88 ಮಂದಿ ಯಾಣಿಸಬಹುದಾಗಿದೆ. ಈ ವಿಶೇಷ ಬೋಗಿಯು ಪಶ್ಚಿಮ ಘಟ್ಟದ ನಡುವೆ ಸಂಚರಿಸುವ ಸಂದರ್ಭ ರೈಲು ಪ್ರಯಾಣಿಕರಿಗೆ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಕಣ್ತುಂಬಿಸುವ ಅವಕಾಶ ಸಿಗಲಿವೆ.
ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್‌ಗಳನ್ನು ಜೋಡಿಸಲಾಗಿದೆ. ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರು ಪ್ರಕೃತಿಯ ಸೊಬಗಿನ ದರ್ಶನವನ್ನು ಪಡೆಯಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ ಮೇರೆಗೆ ವಿಸ್ಟಾಡೋಮ್ ರೈಲು ಸಂಚಾರ ಆರಂಭಗೊಂಡಿದೆ.
ಪಶ್ಚಿಮ ಘಟ್ಟದ ನಡುವೆ ಹಾದುಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯಲು ಸಿದ್ಧರಾಗಿದ್ದಾರೆ. ಮಾರ್ಗ ಮಧ್ಯದಲ್ಲಿ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಲಿದ್ದಾರೆ. ಮಳೆಗಾಲದಲ್ಲೇ ಈ ಸಂಚಾರ ಆರಂಭಗೊಂಡ ಕಾರಣ ಪ್ರಕೃತಿಯ ಸೊಬಗು ಸವಿಯಲು ಪ್ರಯಾಣಿಕರು ಪುಳಕಿತರಾಗಿದ್ದಾರೆ.
ವಿಸ್ಟಾಡೋಮ್ ಕೋಚ್ ಗಾಜಿನ ದೊಡ್ಡ ಚಾವಣಿಯನ್ನು ಒಳಗೊಂಡಿದೆ. 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು ಇದರಲ್ಲಿದೆ. ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೊ ಓವನ್, ಪುಟ್ಟ ರೆಫ್ರಿಜರೇಟರ್‌ಗಳ ಸಹಿತ ಹಲವು ಸೌಲಭ್ಯಗಳನ್ನು ಕೂಡ ಹೊಂದಿದೆ. ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಈ ವಿಸ್ಟಾಡೋಮ್ ಬೋಗಿ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸಂದರ್ಭ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತ್ರಿಲೋಕ್ ಕೊಠಾರಿ, ಕಾರ್ಪೊಟರ್‌ಗಳಾದ ಶೋಭಾ ಪೂಜಾರಿ, ಸುಧೀರ್ ಶೆಟ್ಟಿ ಕಣ್ಣೂರು, ಸಂದೀಪ್ ಗರೋಡಿ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English