ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಅನುಮೋದನೆ

1:34 AM, Tuesday, July 13th, 2021
Share
1 Star2 Stars3 Stars4 Stars5 Stars
(4 rating, 1 votes)
Loading...

Basavakalyanaಬೆಂಗಳೂರು  : ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ 2021-22 ನೇ ಸಾಲಿನ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ  ಸಭೆ ನಡೆಸಿ ಸೋಮವಾರ ಚಾಲನೆ ನೀಡಲಾಯಿತು.

ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ 134 ಕಾಮಗಾರಿಗಳ ಪೈಕಿ ಈವರೆಗೆ 76 ಕಾಮಗಾರಿಗಳು ಪೂರ್ಣಗೊಂಡಿದ್ದು, 58 ಕಾಮಗಾರಿಗಳು ಬಾಕಿ ಇರುತ್ತವೆ.

ಒಟ್ಟು 500 ಕೋಟಿ ರೂ ವೆಚ್ಚದ ಅನುಭವ ಮಂಟಪ ಯೋಜನೆಗೆ ಸರ್ಕಾರ 200 ಕೋಟಿ ರೂ ಹಂಚಿಕೆ ಮಾಡಿದೆ. 101 ಎಕರೆ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಹನ್ನೊಂದು ಎಕರೆ 25 ಗುಂಟೆ ಉಚಿತವಾಗಿ ಲಭ್ಯವಿದ್ದು, 69 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈ ಭೂಮಿಯ ಮಾಲೀಕರು ಹೆಚ್ಚು ಪರಿಹಾರ ಬಯಸಿದ್ದು, ಮಾರುಕಟ್ಟೆ ದರದಲ್ಲಿ ಪರಿಹಾರ ಕೇಳುತ್ತಿದ್ದಾರೆ. ಆದುದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ತೊಂದರೆಯಾಗಿದೆ. ಪರಸ್ಪರ ಸಂದಾನ ನಡೆಸಿ ರೈತರ ಸಮ್ಮತಿ ಪಡೆದು ಭೂ ಸ್ವಾಧೀನ ಪ್ರಕ್ರಿಯೆ ಜರುಗಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ಸಲಹೆ ಮಾಡಿದರು. ಈ ವರ್ಷ ಬಜೆಟ್ ನಲ್ಲಿ ಲಭ್ಯವಿರುವ 10 ಕೋಟಿ ರೂ ಸೇರಿಸಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಸೂಚಿಸಲಾಯಿತು.

ಪ್ರಸ್ತುತ ಲಭ್ಯವಿರುವ ಭೂಮಿಯಲ್ಲಿ ಮಣ್ಣಿನ ಪರೀಕ್ಷೆ ಮತ್ತು ಇತರ ಕಾಮಗಾರಿಗಳು ನಡೆದಿವೆ. ಭೂಸ್ವಾಧೀನ ಪ್ರಕ್ರಿಯೆ ಜೊತೆಜೊತೆಗೆ ಡಿಪಿಆರ್ ಹಾಗೂ ಇತರೆ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಇನ್ನು ಮುಂದೆ ಬಸವಕಲ್ಯಾಣ ಸಭೆಗೆ ಬೀದರ್ ಜಿಲ್ಲೆಯ ಜಿಲ್ಲಾ ಶಾಸಕರನ್ನು ಆಹ್ವಾನಿಸುವಂತೆ ಭಾಲ್ಕಿ ಶಾಸಕ ಶ್ರೀ ಈಶ್ವರ ಖಂಡ್ರೆ ಅವರು ನೀಡಿದ ಸಲಹೆಗೆ ಮುಖ್ಯಮಂತ್ರಿಗಳು ಸಮ್ಮತಿ ವ್ಯಕ್ತಪಡಿಸಿದರು.

ರೈತರ ಒಪ್ಪಿಗೆ ಮೇರೆಗೆ ಭೂಸ್ವಾಧೀನಪಡಿಸಿಕೊಳ್ಳವ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದಲ್ಲಿ ಸಭೆಯೊಂದನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಕಾಗಿನೆಲೆ ಪ್ರಾಧಿಕಾರದ ಸಭೆ
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ ಕೂಡ ಇಂದು ಜರುಗಿತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ 14 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಸಭೆ ಅನುಮೋದನೆ ನೀಡಿತು. ಕಾಗಿನೆಲೆಯಲ್ಲಿ ನಿರ್ಮಾಣ ಪೂರ್ಣಗೊಳಿಸಿರುವ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಶೀಘ್ರ ಉದ್ಘಾಟಿಸಲು ನಿರ್ಧರಿಸಲಾಯಿತು.

ರಾಯಣ್ಣ ಪ್ರಾಧಿಕಾರ
ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ಇಂದು ಜರುಗಿ 21-22ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಗೆ ಸಂಬಂಧಿಸಿದ ಬಾಕಿ ಇರುವ ಬಿಲ್ಲುಗಳ 22 ಕೋಟಿ ರೂ ವೆಚ್ಚ ಪಾವತಿ ಮಾಡಲು ಅನುಮೋದನೆ ನೀಡಲಾಯಿತು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಜೆಟ್ ನಲ್ಲಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 62 ಕೋಟಿ ರೂ ಗಳನ್ನು ಒದಗಿಸಿದೆ. 279 ಕೋಟಿ ರೂ ವೆಚ್ಚದ ಕ್ರಿಯಾ ಯೋಜನೆಯನ್ನು ಪ್ರಾಧಿಕಾರ ರೂಪಿಸಿದ್ದು 2017 ರಿಂದ ಈವರೆಗೆ 159 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ರಾಯಣ್ಣನ ಜನಸ್ಥಳದಲ್ಲಿ ಸೈನಿಕ ಶಾಲೆ ಪೂರ್ಣಗೊಂಡಿದೆ. ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಶಾಲೆಯ ಆರಂಭಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು. ಸೈನಿಕ ಶಾಲೆ ಅರಂಭಕ್ಕೆ ಅನುಮೋದನೆ ಹುದ್ದೆಗಳ ಮುಂಜೂರಾತಿ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಂದಘಡದಲ್ಲಿ ಅಂತರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ಮತ್ತು ರಾಕ್ ಗಾರ್ಡನ್ ನಿರ್ಮಾಣ ಕಾಮಗಾರಿಗಳು ಜರುಗಿದ್ದು ಈ ವರ್ಷವೇ ಅವುಗಳನ್ನು ಪೂರ್ಣಗೊಳಿಸುವತೆ ಸೂಚಿಸಲಾಯಿತು.

ಕಳೆದ ವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಪ್ರಾಧಿಕಾರ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಜರುಗಿದ್ದವು. ಮುಂದುವರಿಕೆ ಭಾಗವಾಗಿ ಇಂದು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಭೆಗಳು ಜರುಗಿ ಈ ಎಲ್ಲಾ ಪ್ರಾಧಿಕಾರಗಳ ವಾರ್ಷಿಯ ಕ್ರಿಯಾ ಯೋಜನೆಗಳಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅನುಮೋದನೆ ನೀಡಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English