ಮಂಗಳೂರು ವಿವಿ: ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕುಲಪತಿಗಳು

12:18 AM, Wednesday, July 14th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

VV Booksಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೀಘ್ರ ಅನುಷ್ಠಾನಕ್ಕೆ ತರಲಾಗುವುದು. ಅದರಲ್ಲಿ ಸಂಶೋಧನೆಗೆ ವಿಶೇಷ ಒತ್ತು ನೀಡುವ ಉದ್ದೇಶದಿಂದ ಈಗಾಗಲೇ ಕ್ರಿಯಾಸಮಿತಿಯನ್ನು ರಚಿಸಲಾಗಿದ್ದು ಪ್ರಸಾರಾಂಗದ ಮೂಲಕ ಸಂಶೋಧನಾ ಕೃತಿಗಳ ಪ್ರಕಟಣೆಯನ್ನು ಉತ್ತೇಜಿಸಲಾಗುವುದು, ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್ ಯಡಪಡಿತ್ತಾಯ ಹೇಳಿದ್ದಾರೆ.

ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಪ್ರಸಾರಾಂಗ ಪ್ರಕಟಿಸಿದ ನಾಲ್ಕು ಕೃತಿಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ವೃತ್ತಿಯ ಜೊತೆಗೆ ಪ್ರವೃತ್ತಿ, ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡಾಗ ಮನುಷ್ಯನ ವ್ಯಕ್ತಿತ್ವಕ್ಕೆ ಘನತೆ ಬರುತ್ತದೆ. ಬ್ಯಾರಿ ಸಾಹಿತ್ಯ ಮತ್ತು ತುಳು ರಂಗಭೂಮಿಯ ಬಗೆಗೆ ಸಮಗ್ರ ಸೂಕ್ಷ್ಮ ಅಧ್ಯಯನಗಳು ಆಗಬೇಕಿವೆ, ಎಂದು ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ. ಬಿ ನಾರಾಯಣ ಮಾತನಾಡಿ, ಸ್ಥಳೀಯ ಭಾಷೆ, ಸಾಹಿತ್ಯ, ಸಂಸ್ಕೃತಿ, ಕುರಿತಾದ ಪುಸ್ತಕಗಳನ್ನು ಪ್ರಸಾರಾಂಗದ ಮೂಲಕ ಪ್ರಕಟಿಸಲು ಅವಕಾಶವಿದೆ, ಎಂದರು.

ಡಾ. ಎನ್ ಸುಕುಮಾರ ಗೌಡ ಅವರ ‘An introduction to English Language Curriculum’, ಡಾ. ಸಾಯಿಗೀತಾ ಅವರ ‘ತುಳುವ ನೆಲೆ’, ಬಿ. ಎ ಷಂಶುದ್ದೀನ್ ಅವರ ‘ವಿಶಿಷ್ಟ ಬ್ಯಾರಿ ಜನಾಂಗ’ ಮತ್ತು ಮುದ್ದು ಮೂಡುಬೆಳ್ಳೆ ಅವರ ‘ಪರಿವರ್ತನಶೀಲ ತುಳು ರಂಗಭೂಮಿ’ ಲೋಕಾರ್ಪಣೆಗೊಂಡ ಕೃತಿಗಳಾಗಿವೆ. ನಾಲ್ವರೂ ಲೇಖಕರು ತಮ್ಮ ಕೃತಿಗಳ ಕುರಿತು ಮಾತನಾಡಿದರು.

ಪ್ರಸಾರಾಂಗದ ನಿರ್ದೇಶಕ ಪ್ರೊ. ಅಭಯಕುಮಾರ್ ಪ್ರಸ್ತಾವನೆ ಮಾಡಿದರು. ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ನಿರೂಪಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ಅಬ್ದುಲ್ ರಹೆಮಾನ್ ಕುತ್ತೆತ್ತೂರು, ವಿವಿಯ ಗ್ರಂಥಾಲಯದ ಮುಖ್ಯಸ್ಥ ಡಾ. ಪುರುಷೋತ್ತಮ ಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English