ಕಾಬುಲ್: ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಪೂರ್ತಿ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿದೆ. ಈಗಾಗಲೇ ದೇಶದ ಶೇ. 85ಕ್ಕೂ ಅಧಿಕ ಭಾಗ ತಾಲಿಬಾನ್ ಆಡಳಿತಕ್ಕೆ ಮರಳಿದೆ ಎಂದು ಹೇಳಲಾಗಿದೆ. ನಿಜಕ್ಕೂ ಆ ತಾಲಿಬಾನ್ ಆಡಳಿತ ಬಂದರೆ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಇಲ್ಲದಂತೆ ಆಗಿ, ವಿಶ್ವಕ್ಕೆ ದೊಡ್ಡ ಹೊಡೆತ ಬೀಳಲಿದೆ.
ತಾಲಿಬಾನ್ 1990ರಲ್ಲಿ ಆಂತರಿಕ ಸಂಘರ್ಷ ತೀವ್ರವಾದ ಹೊತ್ತಿನಲ್ಲಿ ಕಂದಹಾರ್‌ನಲ್ಲೇ ಜನ್ಮತಾಳಿದ ಸಂಘಟನೆ. ಸಂಘಟನೆ ತನ್ನದೇ ಆದ ಉಗ್ರ ನಿಯಮಗಳನ್ನು ಹೊಂದಿದೆ. 2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿಯಿಂದ ಆಕ್ರೋಶಗೊಂಡ ಅಮೆರಿಕ, ಉಗ್ರರನ್ನು ಮಟ್ಟಹಾಕುವ ಸಲುವಾಗಿ ಆಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. 20 ವರ್ಷಗಳ ಕಾಲ ಅಲ್ಲಿಯೇ ನೆಲೆ ನೆಲೆಸಿದ್ದ ಅಮೆರಿಕ ಸೇನೆ ಈ ವರ್ಷದ ಮೇ 1ರಿಂದ ಹಿಂದೆ ಸರಿದಿದೆ. ಸೈನಿಕರು ತಮ್ಮ ದೇಶಕ್ಕೆ ವಾಪಸಾಗಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡಿರುವ ತಾಲಿಬಾನ್ ಉಗ್ರರು ಮತ್ತೊಮ್ಮೆ ಅಫ್ಘಾನ್ನಲ್ಲಿ ತಮ್ಮ ಆಡಳಿತ ಸ್ಥಾಪನೆ ಆರಂಭಿಸಿದ್ದಾರೆ.
ಇತ್ತೀಚೆಗೆ ಉತ್ತರ ಅಫ್ಘಾನಿಸ್ತಾನದಲ್ಲಿ ದೂರದ ಜಿಲ್ಲೆಯನ್ನು ವಶಪಡಿಸಿಕೊಂಡ ತಾಲಿಬಾನ್, ಜಿಲ್ಲೆಯ ಇಮಾಮ್‌ಗೆ ಪತ್ರದ ರೂಪದಲ್ಲಿ ಆದೇಶ ನೀಡಿದೆ. ಜಿಲ್ಲೆಯ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಬಜಾರ್ಗೆ ಹೋಗಬಾರದು. ಪುರುಷರು ತಮ್ಮ ಗಡ್ಡವನ್ನು ಕ್ಷೌರ ಮಾಡಬಾರದು. ಯಾರೂ ಧೂಮಪಾನ ಮಾಡುವಂತಿಲ್ಲ ಎನ್ನುವ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮವನ್ನು ಯಾರಾದರೂ ಮುರಿದರೆ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಲಾಗಿದೆ.
1996 ರಿಂದ 2001 ರವರೆಗೆ, ತಾಲಿಬಾನ್ ಸರಿಸುಮಾರು ಮುಕ್ಕಾಲು ಭಾಗದಷ್ಟು ಅಫ್ಘಾನಿಸ್ತಾನದ ಮೇಲೆ ಅಧಿಕಾರವನ್ನು ಹೊಂದಿತ್ತು ಮತ್ತು ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಿನ ವ್ಯಾಖ್ಯಾನವನ್ನು ಜಾರಿಗೊಳಿಸಿತ್ತು. ಆ ಸಮಯದಲ್ಲಿ ಅಲ್ಲಿ ಯಾರೂ ಟಿವಿ ಬಳಸುವಂತಿಲ್ಲ, ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವಂತಿಲ್ಲ, 10 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಶಾಲೆಗೆ ತೆರಳುವಂತಿಲ್ಲ ಎನ್ನುವಂತಹ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಈಗ ತಾಲಿಬಾನ್ ಆಡಳಿತ ಹೆಚ್ಚಲಾರಂಭಿಸಿದ್ದು, ಮತ್ತೆ ಹಳೆಯ ಸ್ಥಿತಿಗೆ ಮರಳುವುದು ಗ್ಯಾರೆಂಟಿ ಎನ್ನಲಾಗಿದೆ.
Click this button or press Ctrl+G to toggle between Kannada and English