ಸಚಿವರಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ: ಖುದ್ದು ಸಿದ್ಧತೆ ಪರಿಶೀಲನೆ

11:09 PM, Saturday, July 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

SureshKumar ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಈಗಾಗಲೇ ಮಕ್ಕಳು ತಮ್ಮ ಶಾಲೆಗಳಿಂದ ಪರೀಕ್ಷಾ ಪ್ರವೇಶಪತ್ರಗಳನ್ನು ಪಡೆದುಕೊಂಡಿದ್ದು, ಪರೀಕ್ಷೆಗೆ ಹಾಜರಾಗಲು ಉತ್ಸುಕರಾಗಿದ್ದಾರೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರದಿಂದ ಆರಂಭವಾಗಲಿರುವ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಗಳನ್ನು ಮತ್ತು ಅಣಕು ಪರೀಕ್ಷೆಗಳನ್ನು ಪರಿಶೀಲಿಸಲು ಶನಿವಾರ ಬೆಂಗಳೂರು ನಗರದ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಈ ಬಾರಿಯ ಪರೀಕ್ಷೆಗೆ ಕಳೆದ ಬಾರಿಗಿಂತ ಹೆಚ್ಚಿನ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.

ರಾಜ್ಯದ 14929 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೊಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶಪತ್ರಗಳನ್ನು ಆಯಾ ಮುಖ್ಯೋಪಾಧ್ಯಾಯರು ಮಂಡಳಿಯ ಜಾಲತಾಣದ ಮೂಲಕ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆದಿದ್ದಾರೆ. ಇಂದು ಶಾಲಾವಧಿಯೊಳಗೆ ಉಳಿದ ಮಕ್ಕಳು ಪ್ರವೇಶ ಪತ್ರ ಪಡೆದು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಸೋಮವಾರ ಪರೀಕ್ಷೆಗೆ ಹಾಜರಾಗಲಿದ್ದಾರೆಂದು ಸಚಿವರು ತಿಳಿಸಿದರು. ಪರೀಕ್ಷೆಗೆ ನೊಂದಾಯಿಸಿದ ಯಾವುದೇ ವಿದ್ಯಾರ್ಥಿ ಪ್ರವೇಶ ಪತ್ರ ಪಡೆಯಲು ಸಾಧ್ಯವಾಗದಿದ್ದಲ್ಲಿ ಸಂಬಂಧಿಸಿದ ಬಿಇಒ/ಡಿಡಿಪಿಐಗಳನ್ನು ಸಂಪರ್ಕಿಸಿ ಪಡೆಯಬಹುದು. ಇದರ ಸಮನ್ವಯಕ್ಕಾಗಿ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
SureshKumar
ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ, ಎಂಇಎ ಪ್ರೌಢಶಾಲೆ, ಸದಾಶಿವನಗರದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ, ದಾಸರಹಳ್ಳಿ, ಪೀಣ್ಯದ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೊನೆ ಹಂತದ ಸಿದ್ಧತೆಗಳನ್ನು ಗಮನಿಸಿದರು.

ಈ ಕೇಂದ್ರಗಳಲ್ಲಿ ಪರೀಕ್ಷಾ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂ ಸೇವಕರು, ಸಹಾಯಕರು ಸೇರಿದಂತೆ ಪರೀಕ್ಷಾ ಪ್ರಕ್ರಿಯೆಗೆ ನಿಯುಕ್ತಿಯಾಗಿರುವ ಅಧಿಕಾರಿಗಳು ರಾಜ್ಯದ ಆರೋಗ್ಯ ಇಲಾಖೆ ಸಿದ್ಧಪಡಿಸಿದ ಎಸ್‍ಒಪಿ ಪ್ರಕಾರ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರುಪಡಿಸುವ ಎಲ್ಲ ಪ್ರಕ್ರಿಯೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಅಗತ್ಯ ಮಾರ್ಗದರ್ಶನ ನೀಡಿದ ಸಚಿವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕೆಂದರು.

ಸೋಮವಾರ ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ಭಾನುವಾರ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಆವರಣವನ್ನು ಸ್ಯಾನಿಟೈಜ್ ಮಾಡಲಾಗುತ್ತದೆ ಮತ್ತು ಪರೀಕ್ಷೆ ಮುಗಿದ ನಂತರವೂ ಸ್ಯಾನಿಟೈಜ್ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಜುಲೈ 19ರಂದು ಕೋರ್ ವಿಷಯಗಳಿಗೆ ಮತ್ತು 22ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭಗೊಳ್ಳಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಪರೀಕ್ಷಾ ಪ್ರಕ್ರಿಯೆಯಲ್ಲಿ ನಿಯೋಜಿತರಾಗುವ 1,19,469 ಮಂದಿ ಎಲ್ಲ ಸ್ತರದ ಸಿಬ್ಬಂದಿ ಈಗಾಗಲೇ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದವರನ್ನಷ್ಟೇ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿರಬೇಕು. ಒಂದು ಡೆಸ್ಕ್ಗೆ ಒಬ್ಬ ಪರೀಕ್ಷಾರ್ಥಿ ಮಾತ್ರವೇ ಇರಲಿದ್ದಾರೆ. ಕಳೆದ ವರ್ಷದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ಕೇಂದ್ರಗಳನ್ನು ದ್ವಿಗುಣಗೊಳಿಸಲಾಗಿದೆ. ಪರೀಕ್ಷಾ ಕೊಠಡಿಗಳನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಈ ಬಾರಿ ಪರೀಕ್ಷೆ ಸರಳೀಕೃತವಾಗಿರಲಿದೆ ಎಂದು ಸಚಿವರು ಹೇಳಿದರು.

SureshKumar ವಿಶೇಷ ಕೊಠಡಿ:
ಕೆಮ್ಮು, ನೆಗಡಿ, ಜ್ವರ ಮೊದಲಾದುವುಗಳಿಂದ ಬಳಲುತ್ತಿರುವ ಇಲ್ಲವೇ ಈ ಲಕ್ಷಣಗಳಿರುವ ಅಭ್ಯರ್ಥಿಗಳಿಗಾಗಿ ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳನ್ನಾಗಿ ಕಾಯ್ದಿರಿಸಲಾಗಿದೆ. ಸಿಬ್ಬಂದಿ ಮತ್ತು ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್‌ ಪ್ರವೇಶಿಸುವರು. ಆರೋಗ್ಯ ಕೌಂಟರ್‌ ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರಲಿವೆ. ಥರ್ಮಲ್ ಸ್ಯಾನರ್, ಪಲ್ಸ್‌ ಆಕ್ಸಿಮೀಟರ್‌, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರಲಿವೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್‌ ಗಳಲ್ಲೇ ಮಾಸ್ಕ್‌ ನೀಡಲಾಗುತ್ತದೆ ಎಂದು ಸೂರೇಶ್‌ ಕುಮಾರ್‌ ತಿಳಿಸಿದ್ದಾರೆ.

ತುರ್ತು ಚಿಕಿತ್ಸಾ ವಾಹನ:
ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನುಮೀಸಲಿಡುವುದು. ಪರೀಕ್ಷಾ ಸಿಬ್ಬಂದಿಯೂ ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅಗತ್ಯ ಬಿದ್ದರೆ ಸಿಬ್ಬಂದಿ ಫೇಸ್‌ ಶೀಲ್ಡ್‌ ಬಳಸುವುದು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಹೊರ ರಾಜ್ಯದಿಂದ ಬರುವ ಪರೀಕ್ಷಾರ್ಥಿಗಳಿಗೆ ಅನುವಾಗುವಂತೆ ಪರೀಕ್ಷೆಗಳ ದಿವಸದಂದು ರಾಜ್ಯದ ಗಡಿ ಪ್ರವೇಶಕ್ಕೆ ಆಯಾ ಜಿಲ್ಲಾಧಿಕಾರಿಗಳು ಗಡಿ ಜಿಲ್ಲೆಯ ಅಧಿಕಾರಿಗಳೊಂದಿಗೆ ವ್ಯವಹರಿಸಿ ಕ್ರಮ ವಹಿಸಲಾಗಿದೆ ಎಂದು ಎಂದು ಸಚಿವರು ತಿಳಿಸಿದರು.

ಕೋವಿಡ್‌ ಕೇರ್‌ ಸೆಂಟರ್ ಸ್ಥಾಪನೆ:
ಪರೀಕ್ಷಾರ್ಥಿಗಳಿಗೆ ಕೋವಿಡ್‌ ಪಾಸಿಟೀವ್ ಕಂಡು ಬಂದಿದ್ದರೆ ಅಂತಹ ಪರೀಕ್ಷಾರ್ಥಿಗೆ ತಾಲೂಕಿಗೊಂದು ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಯೇ ಅವರಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಸೋಂದು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್‌ ನಲ್ಲಿದ್ದರೆ ಅವರನ್ನು ತಪಾಸಣೆ ನಡೆಸಿ ಆರೋಗ್ಯವಾಗಿರುವುದು ಕಂಡುಬಂದರೆ ಸಮೀಪದ ವಿದ್ಯಾರ್ಥಿ ಕೋವಿಡ್‌ ಕೇರ್‌ ಸೆಂಟರ್‌ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಕೋವಿಡ್‌ ಕೇರ್‌ ಕೇಂದ್ರದಲ್ಲಿ ಒಂದು ಅಂಬುಲೆನ್ಸ್‌ ವಾಹನ ಕಾಯ್ದಿರಿಸಲಾಗಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ರವಾನೆ, ಪರೀಕ್ಷೆ ನಂತರ ಒಎಂಆರ್ ಶೇಟ್‌ ಗಳ ರವಾನೆ ಕುರಿತು ನಿಗದಿತ ಸೂಚನೆಗಳನ್ನು ನೀಡಲಾಗಿದೆ. ಆರೋಗ್ಯಕರ ವಾತಾವರಣದಲ್ಲಿ ಪರೀಕ್ಷೆ ಯಶಸ್ಸಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಆಯಾ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಸೆಂಟರ್‌ ಗಳನ್ನು ಮುಚ್ಚಿಸಲು ಮತ್ತು ಸೆಕ್ಷನ್-144 ಜಾರಿಗೊಳಿಸಲು ಕ್ರಮ ವಹಿಸಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ ಸಮಯದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಪರೀಕ್ಷಾ ಕೇಂದ್ರದ ಬಳಿ ಸಂಚಾರ ಒತ್ತಡವಾದಂತೆ ಕ್ರಮ ವಹಿಸುವರು ಎಂದೂ ಸುರೇಶ್ ಕುಮಾರ್ ವಿವರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English