6 ಮಂದಿಗೆ ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ

6:00 AM, Monday, July 19th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

lindaಮಂಗಳೂರು: ನಗರದ ಫಾದರ್ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ ನಡೆಸಲಾಗಿದ್ದು, ಈ ಮೂಲಕ 6 ಮಂದಿಗೆ ಜೀವದಾನ ಮಾಡಿದಂತಾಗಿದೆ.

ಕಿನ್ನಿಗೋಳಿಯ ಅವಿವಾಹಿತೆ ಲಿಂಡಾ ಶಾರೆನ್ ಡಿಸೋಜ(41) ಅವರ ಮೆದುಳು ನಿಷ್ಕ್ರಿಯಗೊಂಡ ಕಾರಣ ದಾನ ಮಾಡಲು ಆಕೆಯ ಸೋದರರು ನಿರ್ಧರಿಸಿದ್ದರು. ಭಾನುವಾರ ಸಂಜೆ ಈ ಪ್ರಕ್ರಿಯೆ ಪೂರ್ಣಗೊಂಡಿತು.

ಲಿಂಡಾ ಅವರ ಹೃದಯ ಮತ್ತು ಶ್ವಾಸಕೋಶ ಚೆನ್ನೈನ ಎಂಜಿಎಂ ಆಸ್ಪತ್ರೆಗೆ, ಲಿವರ್(ಯಕೃತ್ತು) ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ, ಎರಡು ಕಿಡ್ನಿಗಳಲ್ಲಿ ಒಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹಾಗೂ ಇನ್ನೊಂದು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಹಾಗೂ ಭಾಗಶಃ ಚರ್ಮ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗಾಗಿ ಕಸಿ ಕಟ್ಟಲು ದಾನ ಮಾಡಲಾಗಿದೆ.

ಲಿಂಡಾ ಅವರು ಬದುಕುಳಿಯುವುದು ಅಸಾಧ್ಯ ಎಂದು ಆಕೆಯ ಅಣ್ಣಂದಿರಾದ ಲ್ಯಾನ್ಸಿ ಪ್ರಕಾಶ್ ಡಿಸೋಜ ಮತ್ತು ಸಂತೋಷ್ ಡಿಸೋಜ ಅವರ ಗಮನಕ್ಕೆ ತಂದು ಆಕೆಯ ಅಂಗಾಂಗ ದಾನ ಮಾಡಬಹುದೇ ಎಂಬ ಕೋರಿಕೆಯನ್ನು ಮುಂದಿಟ್ಟಾಗ ಅದಕ್ಕವರು ಒಪ್ಪಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಂಗಾಂಗ ದಾನ ನಿಯಂತ್ರಣ ಸಂಸ್ಥೆಯನ್ನು ಸಂಪರ್ಕಿಸಿ ಅಂಗಾಂಗ ದಾನಕ್ಕೆ ವ್ಯವಸ್ಥೆ ಮಾಡಲಾಯಿತು.

ಹೃದಯ ಮತ್ತು ಶ್ವಾಸಕೋಶ ಹಾಗೂ ಯಕೃತ್ತನ್ನು ಭಾನುವಾರ ಸಂಜೆ ಆಂಬುಲೆನ್ಸ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು, ಅಲ್ಲಿಂದ ವಿಮಾನ ಮೂಲಕ ಚೆನ್ನೈ ಮತ್ತು ಬೆಂಗಳೂರಿಗೆ ಸಾಗಿಸಲಾಯಿತು. ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಸಾಗಲು ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ್ದರು.

ಲಿಂಡಾ ಶಾರೆನ್ ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ರಕ್ತದೊತ್ತಡ ಕಾಯಿಲೆಯಿಂದ 4 ವರ್ಷಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದು ಕಿನ್ನಿಗೋಳಿಯಲ್ಲಿ ತಾಯಿ ಜತೆ ವಾಸವಿದ್ದರು. ರಕ್ತದೊತ್ತಡ ಮತ್ತು ತಲೆನೋವು ತೀವ್ರವಾದ ಹಿನ್ನೆಲೆಯಲ್ಲಿ ಜು.11ರಂದು ಫಾದರ್ ಮುಲ್ಲರ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. 4 ವರ್ಷಗಳಿಂದ ಆರೋಗ್ಯ ಸಲಹೆ ನೀಡುತ್ತಿದ್ದ ಡಾ.ವೆಂಕಟೇಶ್ ಎಂ. ಅವರಲ್ಲದೆ, ಡಾ.ರಾಘವೇಂದ್ರ, ಡಾ.ಜೋವರ್ ಲೋಬೊ, ಡಾ.ಮಂಜುನಾಥ್ ಜೆ. ಅವರು ಚಿಕಿತ್ಸೆ ನೀಡುತ್ತಿದ್ದರು. ಸಿ.ಟಿ.ಸ್ಕ್ಯಾನ್ ಮಾಡಿದಾಗ ಲಿಂಡಾ ಅವರ ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಟಿರುವುದು ಕಂಡು ಬಂದಿದ್ದು, ಅದರಿಂದಾಗಿ ಪ್ರಜ್ಞಾ ಹೀನರಾದ ಕಾರಣ ತೀವ್ರ ನಿಗಾ ಘಟಕದ ವೆಂಟಿಲೇಟರ್‌ನಲ್ಲಿ ದಾಖಲಿಸಿದ್ದು, ಶನಿವಾರ ಅವರ ಮಿದುಳು ನಿಷ್ಕ್ರಿಯವಾಯಿತು ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English