ನಗರ ಪ್ರದಕ್ಷಿಣೆಯಲ್ಲಿ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದ ಸಚಿವ ಅಶೋಕ

9:33 PM, Friday, July 23rd, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka ಬೆಂಗಳೂರು : ನಗರದಲ್ಲಿ ಕೈಗೊಳ್ಳಲಾಗುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಗಳು ಮತ್ತು ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕಂದಾಯ ಸಚಿವ ಆರ್ ಅಶೋಕ ಕೂಡಾ ಸಾಥ್ ನೀಡಿದರು. ಈ ವೇಳೆ ನಗರದ ವಿವಿಧ ಪ್ರಮುಖ ಜಂಕ್ಷನ್‍ ಗಳಲ್ಲಿ ಥೀಮ್ ಆಧಾರಿತ ಯೋಜನೆಗಳನ್ನ ಅಭಿವೃದ್ಧಿ ಪಡಿಸುವ ಕುರಿತಂತೆ ಘೋಷಣೆ ಮಾಡಲಾಯಿತು. ಇದರ ಮೊದಲ ಭಾಗವಾಗಿ ವಿಂಡ್ಸರ್ ಮ್ಯಾನರ್ ಜಂಕ್ಷನ್ ನಲ್ಲಿ ನಿರ್ಮಿಸಲಾದ ಮೇಕ್ ಇನ್ ಇಂಡಿಯಾ ಸಿಂಹದ ಲಾಂಛನವನ್ನ ಇದೇ ಫೆಬ್ರವರಿ 27ರಂದು ಉದ್ಘಾಟಿಸಲಾಗಿತ್ತು. ಎರಡನೇಯದ್ದಾಗಿ ಕೆ ಆರ್ ಸರ್ಕಲ್‍ನಲ್ಲಿ ನಿರ್ಮಿಸಲಾದ ಇಂಜಿನಿಯರಿಂಗ್ ಆಧಾರಿತ ಥೀಮ್ ಪೂರ್ಣಗೊಂಡಿದ್ದು, ಕಾರಂಜಿ ಮತ್ತು ಇನ್ನಿತರ ಚಿಕ್ಕ ಪುಟ್ಟ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಮೂರನೇಯದ್ದಾಗಿ ನಾಯಂದಹಳ್ಳಿ ಜಂಕ್ಷನ್ ನಲ್ಲಿ ನಿರ್ಮಿಸಲಾಗಿದ್ದು, ಮೈಸೂರು ದಸರಾ ಪರಿಕಲ್ಪನೆಯಲ್ಲಿ ರೂಪಗೊಂಡಿರುವ ಈ ಯೋಜನೆಯನ್ನು ಇಂದು ಅನಾವರಣಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಕುಂಬ್ಳೆ ವೃತ್ತದಲ್ಲಿ ಕ್ರಿಕೆಟ್ ಥೀಮ್ ಹಾಗೂ ಮೇಕ್ರಿ ವೃತ್ತದಲ್ಲಿ ಸ್ವಾಗತ ಚಿಹ್ನೆಯನ್ನು ಸಿದ್ಧಪಡಿಸಲಾಗುತ್ತಿದೆ.

ಅತಿವೃಷ್ಟಿ ಪರಿಸ್ಥಿತಿ
ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಧಾರವಾಡ, ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಪರಿಸ್ಥಿತಿ ಎದುರಿಸಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್ ಅಶೋಕ ತಿಳಿಸಿದರು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, “ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ 300ಎಂಎಂ ಮಳೆಯಾಗಿದ್ದು, ಅಂಕೋಲಾ ತಾಲ್ಲೂಕಿನ ಡೋಗ್ರಿ ಗ್ರಾಮದಲ್ಲಿ ದಾಖಲೆಯ 541ಎಂಎಂ ಸೇರಿದಂತೆ ಶಿರಸಿ ತಾಲ್ಲೂಕಿನ ಹಲವೆಡೆ 400ಎಂಎಂ ಮಳೆಯಾಗಿದೆ”, ಎಂದು ತಿಳಿಸಿದರು.

ಸಚಿವರು ತಿಳಿಸಿದಂತೆ 13 ಪ್ರಮುಖ ಜಲಾಶಯಗಳಲ್ಲಿ 561.42 ಟಿಎಂಸಿ ನೀರು ಶೇಖರಣೆಗೊಂಡಿದ್ದು, ಶೇ.65ರಷ್ಟು ಭರ್ತಿಯಾಗಿವೆ. ಸಾಮಾನ್ಯವಾಗಿ ಈ ವೇಳೆ ಕೇವಲ ಶೇ.46ರಷ್ಟು ಮಾತ್ರ ಭರ್ತಿಯಾಗಿರುತ್ತಿದ್ದವು. ಅಚ್ಚರಿಯ ಸಂಗತಿಯೆಂದರೆ ಕೇವಲ 24 ಗಂಟೆಯಲ್ಲಿ 42 ಟಿಎಂಸಿ ನೀರು ಹರಿದು ಬಂದಿದೆ.

R Ashoka “ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಬೀಳುತ್ತಿರುವುದುರಿಂದ ಹೆಚ್ಚಿನ ನದಿಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪರಿಸ್ಥಿತಿಯನ್ನ ಅವಲೋಕಿಸಿದರೆ ಇನ್ನು ಕೆಲವೇ ದಿನಗಳಲ್ಲಿ ಇಳಿಜಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ. ಒಂದು ವೇಳೆ ಪ್ರವಾಹ ಉಂಟಾದರೆ ರಾಯಚೂರು, ಕೊಡಗು, ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲಿ ನಾಲ್ಕು ಎನ್ ಡಿ ಆರ್ ಎಫ್ ತಂಡಗಳನ್ನ ನಿಯೋಜಿಸಲಾಗಿದೆ ಮತ್ತು ಹೆಚ್ಚುವರಿಯಾಗಿ ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಎರಡು ತಂಡಗಳನ್ನ ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿನ ತಂಡವು ಈಗಾಗಲೇ ಶಿವಮೊಗ್ಗದತ್ತ ಹೊರಟಿದೆ”, ಎಂದು ಮಾಹಿತಿ ನೀಡಿದರು.

“ಭೂ ಕುಸಿತ ಉಂಟಾಗಿದ್ದರಿಂದ ಹಾಸನ ಮತ್ತು ಬೇಲೂರಿಗೆ ಸಂಪರ್ಕ ಕಲ್ಪಿಸುವ ಎನ್ ಎಚ್ 75ರಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯವಾಗಿ ಚಾರ್ಮುಡಿಘಾಟ್ ಮುಖಾಂತರ ವಾಹನಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ವಿಪತ್ತಿಗೆ ತುತ್ತಾದ ಜನರ ರಕ್ಷಣೆಗೆ ಈಗಾಗಲೇ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ 18 ತಾಲ್ಲೂಕುಗಳಲ್ಲಿ 131 ಗ್ರಾಮಗಳು ತೊಂದರೆಗೆ ಸಿಲುಕಿವೆ ಮತ್ತು 830 ಮನೆಗಳು ಹಾನಿಗೊಳಗಾಗಿದ್ದು, 8733 ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ 80 ಕಾಳಜಿ ಕೇಂದ್ರಗಳನ್ನ ಸಿದ್ಧಪಡಿಸಲಾಗಿದೆ”, ಎಂದರು.

ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ವೀಡಿಯೋ ಸಂವಾದದಲ್ಲಿ ಸಚಿವ ಅಶೋಕ ಕೂಡಾ ಭಾಗವಹಿಸಿದ್ದರು. ಈ ವೇಳೆ ಮುಖ್ಯ ಕಾರ್ಯದರ್ಶಿ ಪಿ ರವಿ ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English