ಕೋವಿಡ್-19 ಸೋಂಕಿನ ಸಂಭಾವ್ಯ ಮೂರನೇ ಅಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

6:10 AM, Saturday, July 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

KV Rajendraಮಂಗಳೂರು : ಕೋವಿಡ್-19 ಸೋಂಕಿನ ಮೊದಲ ಹಾಗೂ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತದೊಂದಿಗೆ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ಸಂಭಾವ್ಯ ಮೂರನೇ ಅಲೆ ಎದುರಾದಲ್ಲೀ ಅದನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದರು.

ಅವರು ಜು.23ರ ಶುಕ್ರವಾರ ನಗರದ ವೆನ್‍ಲಾಕ್ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ಶಿಶು ವೈದ್ಯರ ಜಿಲ್ಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಜು.23ರಂದು ಕೋವಿಡ್-19ನ 3ನೇ ಅಲೆ ತಡೆಗಟ್ಟುವಿಕೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಕೋವಿಡ್-19 ಕರ್ತವ್ಯ ನಿರ್ವಹಿಸುವ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಯವರಿಗೆ ತರಬೇತಿ ನೀಡುವ ಮೂಲಕ, ಅವರಲ್ಲಿ ಮತ್ತಷ್ಟು ಆತ್ಮಸ್ಥೆರ್ಯ ಹೆಚ್ಚಿಸಬೇಕು, ಜಿಲ್ಲಾಡಳಿತದೊಂದಿಗೆ ಇತರೆ ಇಲಾಖೆಗಳ ಸಮನ್ವಯತೆ, ಖಾಸಗಿ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು, ಸಂಭಾವ್ಯ ಮೂರನೇ ಅಲೆಯಲ್ಲಿ ಮಕ್ಕಳಿಗೆ ಬರುವ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

ಸಮುದಾಯದ ಸಹಭಾಗಿತ್ವದೊಂದಿಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮಕೈಗೊಳ್ಳಬೇಕು, ಆರೋಗ್ಯ, ಆಶಾ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಬೇಕು, ಅವರ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ 18 ವರ್ಷದೊಳಗಿನ ಎಲ್ಲಾ ಮಕ್ಕಳ ಸಾಮಾನ್ಯ ಆರೋಗ್ಯ ಸ್ಥಿತಿಯ ವಿವರಗಳನ್ನು ಪಡೆದು ವಿಶೇಷವಾಗಿ ಮಕ್ಕಳಲ್ಲಿ ಕಂಡುಬರುವ ತೀವ್ರತರದ ತೊಂದರೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡಬೇಕು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸತ್ರೆಗೆ ಅವರನ್ನು ಕಳುಹಿಸಲು ವೈದ್ಯಾಧಿಕಾರಿಗಳ ಮೂಲಕ ಶಿಫಾರಸ್ಸು ಮಾಡುವುದು ಅತೀ ಅಗತ್ಯ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗೆಂದು ಬರುವ ಮಕ್ಕಳಲ್ಲಿ ಸಾಮಾನ್ಯ ರೋಗಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಬೇಕು, ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಕ್ಷೇತ್ರ ಭೇಟಿ ನೀಡುವ ಸಂದರ್ಭದಲ್ಲೂ ಮಕ್ಕಳಲ್ಲಿ ಏನಾದರೂ ರೋಗ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಕೂಡಲೇ ಗುರುತಿಸಿ ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ ಹಾಗೂ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ತಡೆಗಟ್ಟಲು ಎಲ್ಲರೂ ಸಜ್ಜಾಗಬೇಕು ಎಂದರು.

ಭಾರತೀಯ ಶಿಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಮುರಳಿ ಕೃಷ್ಣ ಮಾತನಾಡಿ, ಕೋವಿಡ್-19 ಸೋಂಕಿನ ಸಂಭಾವ್ಯ ಮೂರನೇ ಅಲೆ ತಡೆಗಟ್ಟುವಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಶಿಶು ವೈದ್ಯರ ಸಂಘದಿಂದ ಸಂಪೂರ್ಣ ಸಹಕಾರವನ್ನು ನೀಡಲಾಗುವುದು, ಈ ಬಗ್ಗೆ ತರಬೇತಿ ನೀಡುವ ಮೂಲಕ ವೈದ್ಯರ ತಂಡ ಕಾರ್ಯಪ್ರವೃತವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ತಜ್ಞರಾದ ಡಾ. ಸ್ವಾತಿ ರಾವ್, ಕೆ.ಎಸ್. ಹೆಗ್ಡೆ, ಎಸ್.ಎಂ.ಒ ಡಬ್ಲ್ಯೂ.ಹೆಚ್.ಓ. ಡಾ. ಸತೀಶ್‍ಚಂದ್ರ ಹಾಗೂ ಕೆ.ಎಂ.ಸಿಯ ಮಕ್ಕಳ ತಜ್ಞ ಡಾ. ಶರತ್ ತರಬೇತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಶಾನ್‍ಬೋಗ್, ಐ.ಎ.ಪಿ ಅಧ್ಯಕ್ಷರಾದ ಡಾ. ಮುರಳಿಕೃಷ್ಣನ್, ಐ.ಎ.ಪಿ ರಾಷ್ಟ್ರೀಯ ಅಧ್ಯಕ್ಷ ಡಾ. ಸಂತೋμï ಸೋನ್ಸ್, ಸದಸ್ಯ ಕಾರ್ಯದರ್ಶಿ ಡಾ. ಶ್ರೀಕೃಷ್ಣ ಭಾಗವಹಿಸಿದ್ದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English