ಬಂಟ್ವಾಳ : ಒಬ್ಬ ಶಾಸಕನ ಹಿಂದೆ ಜನ ಓಡಾಡುವುದಕ್ಕಿಂತಲೂ ಪಕ್ಷದ ಹಿಂದೆ ಕಾರ್ಯಕರ್ತರು ಹೋದಾಗ ಪಕ್ಷ ಗಟ್ಟಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಬಲಿಷ್ಠ ಪಡಿಸುವ ದೃಷ್ಟಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಲಹೆ ಪಡೆದು ಕೆಲಸ ಮಾಡಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷವನ್ನು ಬಲಪಡಿಸಿದಾಗ ಮಾತ್ರ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತದೆ, ಅಮೂಲಕ ಪಕ್ಷ ನಿರಂತರವಾಗಿ ಅಧಿಕಾರಕ್ಕೆ ಬರುವಂತಾಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಹೇಳಿದರು. ನಾನು ಇರಲಿ ಯಾರೇ ಇರಲಿ ಅದು ಮುಖ್ಯವಲ್ಲ, ಕಾರ್ಯಕರ್ತನ ನೆಲೆಯಲ್ಲಿ ಪಕ್ಷ ಬೆಳೆಯಬೇಕು ಎಂಬ ಚಿಂತನೆಯಿಂದ ಪಕ್ಷದ ಸೂಚನೆಯಂತೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಮುಂಬರುವ ಜಿ.ಪಂ.ತಾ.ಪಂ.ನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಾರ್ಯಕರ್ತರಿಗೆ ಶಾಸಕರು ಮನವಿ ಮಾಡಿದರು.
ಬಂಟ್ವಾಳದಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ರಾಜಧರ್ಮದ ರಾಜಕಾರಣದ ಮೂಲಕ ಪಕ್ಷವನ್ನು ಸಂಘಟಾತ್ಮಕವಾಗಿ ಬೆಳೆಸಲು ಕಾರ್ಯಕರ್ತರು ಬಹಳಷ್ಟು ಸಹಕಾರ ನೀಡಿದ್ದಾರೆ.
ಜೊತೆಗೆ ಶಾಂತಿ, ಸುವ್ಯವಸ್ಥೆಗೆ ಅದ್ಯತೆ ನೀಡಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ 800 ಕ್ಕೂ ಅಧಿಕ ರಸ್ತೆಗಳು ಅಭಿವೃದ್ಧಿಯಾಗಿದೆ. 250 ರಸ್ತೆಗಳ ಪ್ರಸ್ತಾವನೆ ಇದ್ದು, ಕಾಂಕ್ರೀಟ್ ರಸ್ತೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ತಾಲೂಕಿನ ಜನರ ಆರೋಗ್ಯ ದ ದೃಷ್ಟಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಯ ಮೂಲ ಸೌಕರ್ಯ ಆದ್ಯತೆ ನೀಡಲಾಗಿದ್ದು, ಎಲ್ಲಾ ರೀತಿಯ ತಜ್ಞ ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೆಂಟಿಲೇಟರ್, ಕ್ಷೇತ್ರದಲ್ಲಿ ಎರಡು ಆಕ್ಸಿಜನ್ ಘಟಕ, ಐಸಿಯು ಬಸ್ಸು ಸೌಕರ್ಯಗಳು ಬಂಟ್ವಾಳ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.
ಬಹುತೇಕ ಎಲ್ಲಾ ಧಾರ್ಮಿಕ ಕೇಂದ್ರ ಗಳ ರಸ್ತೆಗಳ ಅಭಿವೃದ್ಧಿ ಗೆ ಅನುದಾನ ಬಿಡುಗಡೆ ಯಾಗಿದ್ದು ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಧಾರ್ಮಿಕ ಕೇಂದ್ರಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಮಾತನಾಡಿ ಕೊರೊನಾ ಸಂಕಷ್ಟದ ದಿನಗಳಲ್ಲಿ ಶಾಸಕರ ಸಹಾಯವಾಣಿ ಮೂಲಕ ಗ್ರಾಮ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಮುಂಚೂಣಿಯಲ್ಕಿ ನಿಂತು ನಿರಂತರವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಚಿಂತನೆಯ ಮೂಲಕ ದೇಶದಲ್ಲಿ ಪಕ್ಷ ಸಂಘಟನಾತ್ಮಕವಾಗಿ ಬೆಳೆದು ಪ್ರಸ್ತುತ ಅನೇಕ ಕಡೆಗಳಲ್ಲಿ ಅಧಿಕಾರದ ವ್ಯಾಪ್ತಿಯಲ್ಲಿ ಇರುವುದಕ್ಕೆ ಕಾರಣ ಹಿರಿಯರ ಹೋರಾಟದ ಫಲವೇ ಕಾರಣ ಎಂದು ಅವರು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಪಕ್ಷದ ಸಂಘಟನೆಗೆ ಪೂರಕವಾಗಿ ಜವಬ್ದಾರಿ ಗಳನ್ನು ನೀಡಿದ್ದಾರೆ,ಜವಬ್ದಾರಿ ಅರಿತು ನಿಷ್ಠೆ ಯಿಂದ ಮಾಡಿದರೆ ಮಾತ್ರ ಪಕ್ಷ ಸಂಘಟನಾತ್ಮಕ ವಾಗಿ ಬೆಳೆಯಲು ಸಾಧ್ಯ ವಾಗುತ್ತದೆ ಅ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯಬೇಕು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಡಲ ಪ್ರಭಾರಿ, ಸುದೀರ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್ , ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ರವೀಂದ್ರ ಕಂಬಳಿ,ಕಮಲಾಕ್ಷಿ ಕೆ.ಪೂಜಾರಿ, ರಾಮ್ ದಾಸ ಬಂಟ್ಚಾಳ, ಮೋನಪ್ಪ ದೇವಸ್ಯ, ಮಾದವಮಾವೆ, ಸಂದೇಶ್ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ಉಪಸ್ಥಿತರಿದ್ದರು.
ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿ, ಪ್ರಕಾಶ್ ಅಂಚನ್ ಧನ್ಯವಾದ ನೀಡಿದರು. ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English