ಮಂಗಳೂರು : ರೈಲು ಸಂಖ್ಯೆ 01134 ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬಯಿ ರೈಲಿನ ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್ ಮತ್ತು ಗಾರ್ಡ್ ಗಳ ಸಮಯಪ್ರಜ್ಞೆ, ತ್ವರಿತ ಕಾರ್ಯಾಚರಣೆಯನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಗಜಾನನ ಮಲ್ಯರವರು ಶ್ಲಾಘಿಸಿದ್ದಾರೆ. ಅವರ ಉತ್ತಮ ಕಾರ್ಯವನ್ನು ಗುರ್ತಿಸಿ ಅವರಿಗೆ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ದಿನಾಂಕ 23.7.2021 ರಂದು ಬೆಳಿಗ್ಗೆ ಸುಮಾರು 6.10 ಕ್ಕೆ ಕುಲೇಮ್ ನಿಂದ ಕ್ಯಾಸೆಲ್ ರಾಕ್ ಕಡೆಗೆ ಈ ರೈಲನ್ನು ಓಡಿಸುತ್ತಿರುವಾಗ ದೂಧ್ಸಾಗರ್- ಸೋನಾಲಿಮ್ ಭಾಗದ ಕಿ.ಮೀ. ಸಂಖ್ಯೆ 39/800 ರ ಬಳಿ ಮುಂಭಾಗದ ಇಂಜಿನ್ನ ಲೋಕೋ ಪೈಲಟ್ ಶ್ರೀ ರಣ್ ಜಿತ್ ಕುಮಾರ್ ರವರು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂದೆ ಟ್ರ್ಯಾಕ್ ನ ಮೇಲೆ ಬೆಟ್ಟದ ಪಾರ್ಶ್ವದಿಂದ ಮಣ್ಣು ಜಾರಿ ಬೀಳುತ್ತಿರುವುದನ್ನು ಗಮನಿಸಿದರು. ಮುಂದೆ ಉಂಟಾಗಬಹುದಾದ ಅಪಾಯವನ್ನು ಊಹಿಸಿದ ಅವರು ಕೂಡಲೇ ತುರ್ತು ಬ್ರೇಕ್ ಅನ್ನು ಪ್ರಯೋಗಿಸಿ ರೈಲನ್ನು ನಿಲ್ಲಿಸಿದರು. ಟ್ರ್ಯಾಕ್ ನ ಮೇಲೆ ಕೆಸರು ಮಿಶ್ರಿತ ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದ್ದರೂ ಕೂಡಾ ಗಾಲಿಗಳ ಸಮೇತವಾಗಿ ಇಂಜಿನ್ ಹಳಿ ತಪ್ಪಿತು. ಅವರು ಕೂಡಲೇ ದೂಧ್ಸಾಗರ್ ನಿಲ್ದಾಣದ ಸ್ಟೇಷನ್ ಮಾಸ್ಟರ್ ರವರಿಗೆ ವಿಷಯ ತಿಳಿಸಿ ಹುಬ್ಬಳ್ಳಿಯ ನಿಯಂತ್ರಣ ಕಛೇರಿಗೆ ಮಾಹಿತಿ ನೀಡುವಂತೆ ಹೇಳಿದರು. ತುರ್ತು ಬ್ರೇಕ್ ಪ್ರಯೋಗವಾಗುತ್ತಿರುವುದನ್ನು ಗಮನಿಸಿದ ರೈಲಿನ ಗಾರ್ಡ್, ಶ್ರೀ ಶೈಲೇಂದರ್ ಕುಮಾರ್ ರವರು ರೈಲಿನ ಕೊನೆಯಲ್ಲಿರುವ ಬ್ರೇಕ್ವ್ಯಾನ್ ನ ಹ್ಯಾಂಡ್ ಬ್ರೇಕ್ ಅನ್ನು ಪ್ರಯೋಗಿಸಿ ಇಂಜಿನ್ ನ ಹತ್ತಿರ ಹೋದರು. ಇದೇ ಸಮಯದಲ್ಲಿ ಗಾರ್ಡ್ ಮತ್ತು ಲೋಕೋಪೈಲಟ್ ಗಳು ಮುಂದಿನ ಮತ್ತು ಹಿಂಭಾಗದ (Banker) ಇಂಜಿನ್ ಗಳ ಸಹಾಯಕ ಲೋಕೋ ಪೈಲಟ್ ಗಳಿಗೆ ಟ್ರ್ಯಾಕ್ ನ ಎರಡೂ ದಿಕ್ಕಿನಲ್ಲಿ ನಿಗದಿತ ಅಂತರದಲ್ಲಿ ಡೆಟೋನೇಟರ್ ಗಳನ್ನು ಇಡುವಂತೆ ಸೂಚಿಸಿದರು. ರೈಲನ್ನು ಸರಪಳಿಯ ಮೂಲಕ ಹಳಿಗಳೊಂದಿಗೆ ಬಂಧಿಸಿ ಭದ್ರಪಡಿಸಿದರು, ವ್ಹೀಲ್ ಸ್ಕಿಡ್ ಗಳನ್ನು ಇರಿಸಿದರು ಮತ್ತು ಇತರ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರು.
ಮುಂಭಾಗದ ಇಂಜಿನ್ನ ಹಿಂದಿರುವ ಮೊದಲ ಬೋಗಿಯ ಮೇಲೆ ಹಳಿಗಳ ಬದಿಯಲ್ಲಿರುವ ಕಡಿದಾದ ಬೆಟ್ಟಗಳಿಂದ ಕೆಸರು, ಮಣ್ಣು ಬೀಳುತ್ತಿರುವುದನ್ನು ರಣ್ ಜೀತ್ ಮತ್ತು ಶೈಲೇಂದರ್ ಗಮನಿಸಿದರು. ಸುರಕ್ಷತೆಗಾಗಿ ಮೊದಲ 3 ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿ ಈ ಮೂರು ಬೋಗಿಗಳನ್ನು ರೈಲಿನ ಉಳಿದ ಬೋಗಿಗಳಿಂದ ಪ್ರತ್ಯೇಕಿಸಿದರು. ಎಚ್ಚರಿಕೆ ಮತ್ತು ಸಮಯಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿ ಹುಬ್ಬಳ್ಳಿ ವಿಭಾಗದ ನಿಯಂತ್ರಣ ಕಾರ್ಯಾಲಯದಿಂದ ಹಿರಿಯ ಅಧಿಕಾರಿಗಳು ನೀಡಿದ ಸೂಚನೆಗಳನ್ನು ಪಾಲಿಸಿದರು. ಹಿಂಭಾಗದಲ್ಲಿ ಅಳವಡಿಸಲಾಗಿದ್ದ (ಬ್ಯಾಂಕಿಂಗ್) ಇಂಜಿನ್ಗಳ ಸಹಾಯದಿಂದ 345 ಪ್ರಯಾಣಿಕರಿದ್ದ ರೈಲನ್ನು ಕುಲೇಮ್ ನಿಲ್ದಾಣಕ್ಕೆ ಮರಳಿ ಕಳುಹಿಸಿದರು. ಗಾರ್ಡ್ ಶ್ರೀ ಶೈಲೇಂದರ್ ಕುಮಾರ್ ರವರು, ಲೋಕೋ ಪೈಲಟ್ ಶ್ರೀ ಎಸ್.ಡಿ. ಮೀನಾ, ಸಹಾಯಕ ಲೋಕೋ ಪೈಲಟ್ ಶ್ರೀ ಎಸ್.ಕೆ. ಸೈನಿಯವರೊಂದಿಗೆ ಪ್ರಯಾಣಿಕರಿದ್ದ ರೈಲನ್ನು ಸುರಕ್ಷಿತವಾಗಿ ಕುಲೇಮ್ಗೆ ಕೊಂಡೊಯ್ದರು. ರಣ್ಜೀತ್ ಕುಮಾರ್ ಮತ್ತು ಶ್ರೀ ಹಶೀದ್ ಕೆ. ರವರು ಹಳಿ ತಪ್ಪಿದ ಇಂಜಿನ್ನ ಬಳಿ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಉಳಿದುಕೊಂಡರು.
ಘಾಟ್ ಸೆಕ್ಷನ್ ನ ಹಿನ್ನೆಲೆ
ಕ್ಯಾಸೆಲ್ ರಾಕ್-ಕುಲೇಮ್ ಘಟ್ಟ ಪ್ರದೇಶದ ಮಾರ್ಗವು 27 ಕಿ.ಮೀ. ಉದ್ದವಿದ್ದು ಪಶ್ಚಿಮಘಟ್ಟದ ಜನವಸತಿರಹಿತ ಕಾಡಿನ ಮೂಲಕ ಸಾಗುವ ಏಕಪಥ ಮಾರ್ಗವಾಗಿದೆ.
ಇಡೀ ಘಟ್ಟದ ಮಾರ್ಗವು ಕಡಿದಾದ ಇಳಿಜಾರನ್ನು (37 ರಲ್ಲಿ 1 ಗ್ರೆಡಿಎಂಟ್/gradient) ಹೊಂದಿದ್ದು ಮುಂಭಾಗದ ಜೊತೆಗೆ ರೈಲಿಗೆ ಹಿಂಭಾಗದಲ್ಲೂ ಇಂಜಿನ್ ಅಳವಡಿಸುವ ಮೂಲಕ ಹೆಚ್ಚಿನ ಶಕ್ತಿಯನ್ನು (horsepower) ಒದಗಿಸಲಾಗುತ್ತದೆ. ಕ್ಯಾಸೆಲ್ ರಾಕ್ ಮತ್ತು ಕುಲೇಮ್ ನಡುವೆ ಇರುವ ನಿಲ್ದಾಣಗಳಾದ ಕಾರಂಜೋಲ್, ದೂಧ್ ಸಾಗರ್ ಮತ್ತು ಸೋನಾಲಿಮ್ ಗಳನ್ನು ಕೇವಲ ರೈಲು ಮಾರ್ಗದ ಮೂಲಕ ತಲುಪಬಹುದಾಗಿದ್ದು ರಸ್ತೆ ಸಂಪರ್ಕವಿಲ್ಲ.
22.7.21 ಮತ್ತು 23.7.21ರಂದು ಈ ಭಾಗದಲ್ಲಿ 48 ಗಂಟೆಗಳ ಅವಧಿಯಲ್ಲಿ 640 ಮಿ.ಮೀ. ಮಳೆಯಾಗಿದ್ದು ಭೂ ಕುಸಿತ ಉಂಟಾಗಿದೆ.
ಪ್ರಯಾಣಿಕರನ್ನು ಸುರಕ್ಷಿತ ಬೋಗಿಗಳಿಗೆ ಸ್ಥಳಾಂತರಿಸಿ ರೈಲನ್ನು ಮರಳಿ ಕುಲೇಮ್ ಗೆ ಕಳುಹಿಸುವ ಮೂಲಕ ಧೈರ್ಯ ಮತ್ತು ಅನುಕರಣೀಯ ಸಮಯಪ್ರಜ್ಞೆಯನ್ನು ತೋರಿದ ರೈಲಿನ ಚಾಲಕ ಸಿಬ್ಬಂದಿಗಳಿಗೆ (ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್, ಗಾರ್ಡ್) ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಗಜಾನನ ಮಲ್ಯರವರು ಪ್ರೋತ್ಸಾಹದ ರೂಪದಲ್ಲಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.
Click this button or press Ctrl+G to toggle between Kannada and English