ಮಂಗಳೂರು : ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ, ಇಂದೇ ಕರ್ನಾಟಕಕ್ಕೆ ಮುಂದಿನ ಸಿಎಂ ಆಯ್ಕೆ ಮಾಡಿ ಎಂದು ಹೈಕಮಾಂಡ್ ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್ ಮತ್ತು ಕಿಶನ್ ರೆಡ್ಡಿಅವರಿಗೆ ಸೂಚನೆ ನೀಡಿದೆ. ಹೀಗಾಗಿ ಇಂದೇ ಹೊಸ ಸಿಎಂ ಆಯ್ಕೆ ನಡೆಯಲಿದೆ ಎನ್ನಲಾಗುತ್ತಿದೆ.
ಇಂದು ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಾಗುತ್ತಿದೆ. ಶಾಸಕಾಂಗ ಸಭೆ ಹಿನ್ನೆಲೆ ಬಿಜೆಪಿ ಶಾಸಕರಿಗೆ ಬೆಂಗಳೂರಿಗೆ ಬರಲು ಸೂಚನೆ ನೀಡಲಾಗಿದೆ. ಮುಂದಿನ ಸಿಎಂ ಯಾರು ಎಂಬುದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರವಾಗಲಿದೆ.
ಶಾಸಕಾಂಗ ಪಕ್ಷದ ಸಭೆ ನಿರ್ವಹಿಸಲು ಕೇಂದ್ರ ಈ ಮೂವರು ವೀಕ್ಷಕರನ್ನು ನಿಯೋಜನೆ ಮಾಡಿದೆ. ಮಧ್ಯಾಹ್ನ 1.15ರ ವೇಳೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಜೆ ವೇಳೆಗೆ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಸಚಿವ ಕಿಶನ್ ರೆಡ್ಡಿ ಬೆಂಗಳೂರು ತಲುಪಲಿದ್ದಾರೆ. ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ, ಅರುಣ್ ಸಿಂಗ್ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲೇ ನೂತನ ಸಿಎಂ ಆಯ್ಕೆಯನ್ನು ಮಾಡಲಾಗುತ್ತದೆ. ಹಂಗಾಮಿ ಸಿಎಂ ಬಿಎಸ್ ಯಡಿಯೂರಪ್ಪನವರೇ ಮುಂದಿನ ಸಿಎಂ ಹೆಸರು ಸೂಚಿಸಲಿದ್ದಾರೆ. ನೂತನ ಸಿಎಂ ಆಯ್ಕೆಗೆ ಯಡಿಯೂರಪ್ಪನವರ ಸಹಮತವಿದೆ ಎಂದು ಬಿಂಬಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ .
ಸಂಭಾವ್ಯರ ಪಟ್ಟಿಯಲ್ಲಿ ಮುರುಗೇಶ್ ಆರ್. ನಿರಾಣಿ, ಸಿ.ಟಿ. ರವಿ, ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೆಸರು ಕೇಳಿ ಬರುತ್ತಿದೆ.ಇದೇ ವೇಳೆ, ಮುಂದಿನ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಇಬ್ಬರ ಹೆಸರನ್ನ ಸೂಚಿಸಿದ್ದಾರೆನ್ನಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮತ್ತು ಆರ್ ಅಶೋಕ್ ಅವರಲ್ಲೊಬ್ಬರನ್ನ ಸಿಎಂ ಮಾಡಿ ಎಂದು ಹೈಕಮಾಂಡ್ಗೆ ಯಡಿಯೂರಪ್ಪ ಸಲಹೆ ನೀಡಿದ್ದಾರೆಂದು ಮೂಲಗಳು ಹೇಳುತ್ತಿವೆ.
ವೀರಣ್ಣ ಚರಂತಿಮಠ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಬಸವರಾಜ್ ಬೊಮ್ಮಾಯಿ ಮತ್ತು ಬಸನಗೌಡ ಪಾಟೀಲ ಯತ್ನಾಳ್. ಇವರಲ್ಲಿ ವೀರಣ್ಣ ಚರಂತಿಮಠ ಅವರ ಹೆಸರು ಹೊಸದಾಗಿ ಕೇಳಿಬರುತ್ತಿದೆ.
ಮುರುಗೇಶ್ ನಿರಾಣಿ ಹಾಗೂ ಬಸವರಾಜ್ ಬೊಮ್ಮಾಯಿ ಅವರ ಹೆಸರು ಮುಂಚೂಣಿಯಲ್ಲಿದೆ. ಯಡಿಯೂರಪ್ಪ ಅವರ ಒಲವು ಕೂಡ ಗೃಹ ಸಚಿವ ಬೊಮ್ಮಾಯಿ ಅವರ ಮೇಲೆ ಇದೆ ಎಂದೇ ಹೇಳಬಹುದು. ಪಂಚಮಸಾಲಿಗಳ ಪ್ರಬಲ ನಾಯಕ ನಿರಾಣಿ ಅವರು ಇತ್ತೀಚೆಗೆ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ ಬಿಎಸ್ವೈ ವಿರುದ್ದ ಬಹಿರಂಗವಾಗಿ ಯುದ್ದ ಸಾರಿದ್ದ ಬಸನಗೌಡ ಪಾಟೀಲ ಯತ್ನಾಳ್, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕ ಅಲ್ಲದೇ ಒಮ್ಮೆ ಕೇಂದ್ರ ಸಚಿವರಾಗಿದ್ದವರು. ಆದ ಕಾರಣ ಇಷ್ಟು ಜನ ಲಿಂಗಾಯತ ನಾಯಕರು ಸಿಎಂ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್ ಹೊಸಮುಖ, ಶುದ್ಧಹಸ್ತ ರಾಜಕಾರಣಿಗೆ ಸಿಎಂ ಸ್ಥಾನ ನೀಡಲು ಮುಂದಾಗಿರುವುದರಿಂದ ರಾಜ್ಯಮಟ್ಟದಲ್ಲಿ ಪಕ್ಷ ಸಂಘಟಿಸುತ್ತಿರುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಸಿಎಂ ರೇಸಿನಲ್ಲಿ ಅವಕಾಶ ಸಿಗಬಹುದು ಎನ್ನಲಾಗಿದೆ.
Click this button or press Ctrl+G to toggle between Kannada and English