ಪುತ್ತೂರು : ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ. ಈ ಬಗ್ಗೆ ಗ್ರಾ.ಪಂ. ಮಟ್ಟದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಗ್ರಾ.ಪಂ. ಸದಸ್ಯರು ಮುತುವರ್ಜಿ ವಹಿಸಿದರೆ ಗ್ರಾಮದಲ್ಲಿನ ಅರ್ಹ ಫಲಾನುಭವಿಗಳಿಗೆ ಯೋಜನೆಯಿಂದ ದೊರೆಯುವ ಸವಲತ್ತುಗಳನ್ನು ತಿಳಿಸಿ ಅಂಥವರಿಗೆ ತಲುಪಿಸುವ ಜವಾಬ್ದಾರಿ ಗ್ರಾ.ಪಂ. ಸದಸ್ಯರದ್ದು ಎಂದು ಪುತ್ತೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯಪಟ್ಟರು.
ಅವರು ಜು.27 ರಂದು ಪುತ್ತೂರು ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ತಾ.ಪಂ. ವತಿಯಿಂದ ಬನ್ನೂರು, ಬೆಟ್ಟಂಪಾಡಿ, ಕೆದಂಬಾಡಿ, ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಎಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಆಯೋಜಿಸಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಮಿಷನ್ ಯೋಜನೆಯ ಅನುಷ್ಠಾನದ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕಾದರೆ ಜನಪ್ರತಿನಿಧಿಗಳ ಸಹಕಾರ ಮತ್ತು ಮುತುವರ್ಜಿ ಅತೀ ಅಗತ್ಯ. ಈ ಯೋಜನೆಯ ಬಗ್ಗೆ ಜನಪ್ರತಿನಿಧಿಗಳಲ್ಲಿ ಸಂದೇಹಗಳು, ಗೊಂದಲಗಳು ಹಾಗೂ ಮಾಹಿತಿಯನ್ನು ನೀಡುವ ಉದ್ದೇಶವನ್ನು ತಾ.ಪಂ. ಹೊಂದಿದೆ. ಯಶಸ್ವಿ ಅನುಷ್ಠಾನಕ್ಕೆ ಎಲ್ಲರ ಸಹಕಾರ ಮುಖ್ಯ ಹಾಗಿದ್ದಲ್ಲಿ ಮಾತ್ರ ಜಿಲ್ಲೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಹೆಚ್ಚು ಅನುದಾನವನ್ನು ಬಳಸಿಕೊಳ್ಳಲು ಸಾಧ್ಯ ಈ ದಿಸೆಯಲ್ಲಿ ಎಲ್ಲರು ಶ್ರಮಿಸಬೇಕು ಎಂದು ಹೇಳಿದರು.
ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಹಾಗೂ ಕೃಷಿ ಮತ್ತು ಸಂಬಂಧಿತ ಕಾರ್ಯಗಳಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಆದ್ದರಿಂದ ಪ್ರತೀ ಗ್ರಾ.ಪಂ.ನಲ್ಲಿ ವೈಯಕ್ತಿಕ ಫಲಾನುಭವಿಗಳಲ್ಲಿ ತೆರೆದ ಬಾವಿ, ಎರೆಹುಳು ಗೊಬ್ಬರ ತೊಟ್ಟಿ, ಕೆರೆ,ಕೃಷಿ ಹೊಂಡ, ಇಂಗು ಗುಂಡಿಗಳ ರಚನೆಗೆ ಪ್ರೋತ್ಸಾಹ ನೀಡಬೇಕು. ಅದೇ ರೀತಿ ಪ್ರತಿ ಗ್ರಾ.ಪಂ. ಗಳಲ್ಲಿ ಕನಿಷ್ಟ ಒಂದು ಸಾರ್ವಜನಿಕ ಕೆರೆಯನ್ನು ನರೇಗಾ ಮತ್ತು ಇತರ ಅನುದಾನಗಳ ಒಗ್ಗೂಡಿಸುವಿಕೆಯೊಂದಿಗೆ ನಿರ್ಮಿಸಿ ಊರಿಗೊಂದು ಆಸ್ತಿಯನ್ನು ನಿರ್ಮಿಸುವ ಕೆಲಸಗಳು ಆಗಬೇಕೆಂದು ಅಭಿಪ್ರಾಯಪಟ್ಟರು.
ತಾ.ಪಂ. ನರೇಗಾ ಸಹಾಯಕ ನಿರ್ದೇಶಕರಾದ ಶೈಲಜಾ ಭಟ್ ಅವರು ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕವಾಗಿ ಮಾಡಬಹುದಾದ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಿ ಅಧಿಕ ಮಾನವ ದಿನಗಳ ಸೃಜನೆಯಾಗುವಂತೆ ಮಾಡಿ, ಆ ಮೂಲಕ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಿದರು.
ನರೇಗಾ ಯೋಜನೆಯಡಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡುವುದರಿಂದ. ನರೇಗಾ ಯೋಜನೆಯಡಿ ಕೆಲಸಕ್ಕೆ ಮಹಿಳೆಯರೂ ಮುಂದೆ ಬರಬೇಕು. ಪ್ರಸ್ತುತ ಮಹಿಳಾ ಕಾಯಕೋತ್ಸವ ಹಮ್ಮಿಕೊಂಡಿದ್ದು ಮಹಿಳಾ ಸಹಭಾಗಿತ್ವ ಹೆಚ್ಚಾಗಬೇಕು ಎಂದು ಹೇಳಿದರು.
ತಾಲೂಕಿನಲ್ಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳನ್ನು ಪಿಪಿಟಿ, ವೀಡಿಯೋ ಮೂಲಕ ತೋರಿಸಿ, ವಿವರಿಸಲಾಯಿತು. ಬಳಿಕ ಸದಸ್ಯರೊಂದಿಗೆ ಸಂವಾದ ನಡೆಯಿತು. ಯೋಜನೆಯ ಬಗ್ಗೆ ಸದಸ್ಯರಲ್ಲಿದ್ದ ಗೊಂದಲಗಳನ್ನು ನಿವಾರಿಸಲಾಯಿತು.
ಎಸ್‌ಬಿಎಂ ಜಿಲ್ಲಾ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಡೊಂಬಯ್ಯ ಇಡ್ಕಿದು ಅವರು, ಒಣ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕುರಿತು ಸ್ವಚ್ಛಭಾರತ ಮಿಷನ್ ನಲ್ಲಿ ಪ್ರಸ್ತುತ ಗ್ರಾ.ಪಂ. ಗಳ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಸ್ವಚ್ಛ ಗ್ರಾಮದ ನಿರ್ಮಾಣಕ್ಕೆ ಈಗಾಗಲೇ ಕೈಗೊಳಲ್ಲಾದ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಹಿರೇಬಂಡಾಡಿ ಗ್ರಾ.ಪಂ. ನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶೌಕತ್ ಆಲಿ ಅವರು ತಮ್ಮ ಗ್ರಾ.ಪಂ. ನಲ್ಲಿ ನರೇಗಾ ಯೋಜನೆಯಡಿ ಮಾಡಿದ ಸಾಧನೆಗಳ ಕುರಿತು ಜನಪ್ರತಿನಿಧಿಯ ಹಿನ್ನೆಲೆಯಲ್ಲಿ ಮಾಡಬಹುದಾದ ಕೆಲಸದ ಬಗ್ಗೆ ತಿಳಿಸಿದರು.
ನರೇಗಾ ತಾಂತ್ರಿಕ ಸಹಾಯಕ ಅಭಿಯಂತರ ವಿನೋದ್ ಕುಮಾರ್, ನರೇಗಾ ತಾಲೂಕು ಐಇಸಿ ಸಂಯೋಜಕ ಭರತ್‌ರಾಜ್ ನರೇಗಾ ಯೋಜನೆಯ ಮಾಹಿತಿಗಳನ್ನು ನೀಡಿದರು.
ಈ ಸಂದರ್ಭ ತಾಲೂಕು ಸಾಮಾಜಿಕ ಪರಿಶೋಧಕರಾದ ಚಂದ್ರಶೇಖರ್, ಬನ್ನೂರು, ಬೆಟ್ಟಂಪಾಡಿ, ಕೆದಂಬಾಡಿ, ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English