ವಿಶ್ವಾಸಾರ್ಹ, ದಕ್ಷ, ಪಾರದರ್ಶಕ ಆಡಳಿತ: ತಂಡಸ್ಫೂರ್ತಿಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಲಹೆ

3:02 PM, Wednesday, July 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

Bommai ಬೆಂಗಳೂರು : ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು ತಂಡಸ್ಫೂರ್ತಿಯಿಂದ ಕಾರ್ಯನಿರ್ವಹಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಅಧಿಕಾರಿಗಳಿಗೆ ತಿಳಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸರ್ಕಾರದ ಆಡಳಿತ ಒಂದು ನಿರಂತರ ಪ್ರಕ್ರಿಯೆ. ಅದು ಎಂತಹ ಪರಿಸ್ಥಿತಿಯಲ್ಲೂ ಅನಿರ್ಬಂಧಿತವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದ ಜನತೆಗೆ ದಕ್ಷ, ಪ್ರಾಮಾಣಿಕ ಹಾಗೂ ಜನಪರ ಆಡಳಿತ ಕೊಡುವ ದಿಟ್ಟ ತೀರ್ಮಾನ ಕೈಗೊಂಡಿದ್ದೇನೆ. ಇದನ್ನು ಅನುಷ್ಠಾನ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಅರಿತೇ ಈ ಮಾತನ್ನಾಡುತ್ತಿದ್ದೇನೆ ಎಂದು ತಿಳಿಸಿದರು.

ಪ್ರಗತಿಪರ, ಪರಿಣಾಮಕಾರಿ ಆಡಳಿತ ಕೊಟ್ಟ ಹೆಗ್ಗಳಿಕೆ ನಮ್ಮ ರಾಜ್ಯದ್ದು. ಬದಲಾದ ಪರಿಸ್ಥಿತಿಯಲ್ಲಿ ನಾವು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಬೇಕಾಗಿದೆ. ಸಚಿವ ಸಂಪುಟದ ನಿರ್ಣಯಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು. ವಿಳಂಬವಾದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ಆಡಳಿತದಲ್ಲಿ ವಿಳಂಬ ಧೋರಣೆ ಕ್ಯಾನ್ಸರ್ ಇದ್ದಂತೆ. ಆದ್ದರಿಂದ ಸರ್ಕಾರದ ನಿರ್ಣಯಗಳು ನಿಗದಿತ ಕಾಲಮಿತಿಯಲ್ಲಿ ಕಾರ್ಯರೂಪಕ್ಕೆ ಬರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Bommai ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕಾರ್ಯಚಟುವಟಿಕೆಗಳು, ನೀತಿ, ನಿಯಮಾವಳಿಗಳು, ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿದ್ದು ಕಾರ್ಯನಿರ್ವಹಿಸಬೇಕು. ಒಳ್ಳೆಯ ಕೆಲಸಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾಡಿ. ನನ್ನ ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವುದು ಹಾಗೂ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ನಮ್ಮ ಆದ್ಯತೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಇಲಾಖೆಯಲ್ಲಿ ವರ್ಷಾಂತ್ಯದ ವೇಳೆಗೆ ಶೇ. 5 ರಷ್ಟು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು. ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ನಿಗದಿತ ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕು. ಜೊತೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಕುರಿತು ಮತ್ತೊಮ್ಮೆ ವಿವರವಾಗಿ ಚರ್ಚಿಸಿ, ಗೊಂದಲ ನಿವಾರಣೆಗೆ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಇಲಾಖೆಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಲಾಖೆಗಳಿಗೆ ಉತ್ತೇಜನ ನೀಡಲಾಗುವುದು ಎಂದರು.

ಸಭೆಯಲ್ಲಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಮುಖ್ಯಮಂತ್ರಿಯವರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Bommai

ಮಾಣವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ವಿಧಾನಸೌಧದ ಪ್ರವೇಶ ದ್ವಾರದಲ್ಲಿ ನಮಸ್ಕರಿಸಿ ತಮ್ಮ ಕಚೇರಿಗೆ ಆಗಮಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English