ಮಂಗಳೂರು : ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯ ವಿಷಯ ಬಂದಾಗ ಯಾವ ಜಾತಿಗೆ ಎಲ್ಲಿ ಅದ್ಯತೆ ಎಂಬ ಪ್ರಶ್ನೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಏಳುತ್ತದೆ. ಜಾತಿ ರಾಜಕಾರಣ ಹುಟ್ಟು ಹಾಕಿದ್ದೇ ಕಾಂಗ್ರೆಸ್ ಎಂದು ಹೇಳಬಹುದು. ಸಾಮಾಜಿಕ ನ್ಯಾಯದ ನೆಪ ದಲ್ಲಿ ಜಾತಿವಾರು ಲೆಕ್ಕಾಚಾರ ನಡೆಸಿ ಮತಗಳ ಮೇಲೆ ಲಗ್ಗೆ ಇಡಲು ಎಲ್ಲ ರಾಜಕೀಯ ಪಕ್ಷಗಳೂ ಈಗ ಯೋಜನೆ ರೂಪಿಸುತ್ತಿವೆ. ಇಂತಹದ್ದೇ ಲೆಕ್ಕಾಚಾರದ ವರದಿಯೊಂದು ಕಾಂಗ್ರೆಸ್ ನಿಂದ ಹೊರಬಿದ್ದಿದೆ. ದ.ಕ. ಜಿಲ್ಲೆಯ ಕಾಂಗ್ರೆಸ್ ನಲ್ಲಿ ಯಾರು ಯಾವ ಕ್ಷೇತ್ರದ ಅಭ್ಯರ್ಥಿ, ಯಾರಿಗೆ ಆದ್ಯತೆ ನೀಡಬೇಕು ಯಾರನ್ನು ನಿರ್ಲಕ್ಷಿಸಬೇಕು ಎಂದು ಹೇಳುವ ಕತೆಗಳು ಕಾಂಗ್ರೆಸ್ ನಲ್ಲಿ ಹುಟ್ಟಿಕೊಳ್ಳುತ್ತಿವೆ.
ಬಂಟ್ವಾಳದಲ್ಲಿ ರಮಾನಾಥ ರೈ, ಮಂಗಳೂರಿನಲ್ಲಿ ಯು.ಟಿ.ಖಾದರ್ ಮತ್ತು ಮೂಡಬಿದ್ರೆಯಲ್ಲಿ ಅಭಯ ಚಂದ್ರರ ಸ್ಪರ್ದೆ ಅಭಾದಿತವಾಗಿರಲಿದೆ. ಉಳಿದ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಬದಲಾವಣೆ ವಾಸನೆ ಬಡಿಯುತ್ತಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಡಾ. ರಘುರವರಿಗೆ ಬದಲಿ ವ್ಯಕ್ತಿತ್ವ ಈ ವರೆಗೆ ಕಾಣುತ್ತಿಲ್ಲ. ಈ ನಾಲ್ವರು ನಾಲ್ಕು ಜಾತಿ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಇವರ ಹೊರತಾದ ಜಾತಿ ಸಮುದಾಯದವರಿಗೆ ಆಧ್ಯತೆ ನೀಡಬೇಕು ಎನ್ನುತ್ತಿದೆ ಕಾಂಗ್ರೆಸ್ ನ ಒಂದು ಬಳಗ.
ಕಾಂಗ್ರೆಸ್ ಲೆಕ್ಕಾಚಾರದಲ್ಲಿ ಬಂಟರಿಗೆ ಎರಡು ಕಡೆ ಬಿಲ್ಲವರಿಗೆ ಎರಡು ಕಡೆಗಳಲ್ಲಿ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಬಂಟ್ವಾಳದಲ್ಲಿ ಬಂಟರಿದ್ದಾರೆ. ಮತ್ತೆ ಸುರತ್ಕಲ್ ನಲ್ಲಿ ವಿಜಯಕುಮಾರ ಶೆಟ್ಟಿ ಇಲ್ಲವೆ ಕೃಪಾ ಆಳ್ವಾರಿಗೆ ಟಿಕೆಟ್ ಒದಗಿಸಬೇಕು ಎಂಬ ಆಗ್ರಹವೂ ಇದೆ. ಬಂಟರಾಗಿರುವ ಕಳ್ಳಿಗೆ ತಾರಾನಾಥ ಶೆಟ್ಟರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಸಾಗುತ್ತಿದ್ದಾರೆ. ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಬಂಟರು ಸ್ಪರ್ಧಿಗಳಿರುವಾಗ ಕಳ್ಳಿಗೆಗೆಲ್ಲಿ ಸ್ಥಾನ. ಇದೇ ಕ್ಷೇತ್ರದಲ್ಲಿ ಸುರೇಶ ಬಲ್ಲಾಳರ ಹೆಸರು ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ಪಕ್ಕದ ಮೂಡಬಿದ್ರೆಯಲ್ಲಿ ಅಭಯಚಂದ್ರರು ಇರುವುದರಿಂದ ಅದೇ ಸಮುದಾಯದ ಸುರೇಶರ ಆಸೆ ಕೈಗೂಡುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನಬಹುದು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿ ಗೆ ಆಧ್ಯತೆ ನೀಡಬೇಕು ಎಂಬ ಆಗ್ರಹವೂ ಇದೆ. ಕಾಂಗ್ರೆಸ್ ಪಾಲಿನ ಕ್ರೈಸ್ತ ಮೀಸಲು ಕ್ಷೇತ್ರವಾಗಿರುವ ಇಲ್ಲಿ ಬದಲಾವಣೆ ಸಾಧ್ಯವೇ ಎಂಬುದಕ್ಕೆ ಕಾಂಗ್ರೆಸ್ ನಲ್ಲಿ ಬೇರೆಯದೇ ಲೆಕ್ಕಾಚಾರ ಸಿದ್ಧವಾಗಿದೆ.
ರಾಜ್ಯದಲ್ಲಿ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಕ್ರೈಸ್ತರಿಗೆ ಬಿಟ್ಟು ಕೊಡಲಾಗುತ್ತಿದೆ ಬೆಂಗಳೂರಿನ ಭಾರತಿ ನಗರ ಹಾಗೂ ಮಂಗಳೂರು ದಕ್ಷಿಣ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕ್ರೈಸ್ತರು ಮಂಗಳೂರಿಗೆ ಹೊರತಾದ ಕ್ಷೇತ್ರಗಳಲ್ಲೂ ಪ್ರಭಾವಿತರಾಗಿದ್ದಾರೆ ಮತ್ತು ಬೇರೆ ಕ್ಷೇತ್ರಗಳನ್ನೂ ಕೇಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾರ್ಗರೇಟ್ ಆಳ್ವಾರ ಪುತ್ರ ತೇಜಸ್ವಿ ಆಳ್ವಾ ಸಿದ್ಧರಾಗಿದ್ದಾರೆ. ಕ್ರೈಸ್ತರಿಗೆ ಅಲ್ಲಿ ಸ್ಥಾನ ಒದಗಿಸಿದರಾಯಿತು. ಆವಶ್ಯಕ ಎನಿಸಿದರೆ ಮಂಗಳೂರಿಗಿಂತ ಹೆಚ್ಚು ಕ್ರೈಸ್ತರಿರುವ ಕಾಪು ವಿಧಾನ ಸಭಾ ಕ್ಷೆತ್ರವನ್ನೂ ಕ್ರೈಸ್ತರಿಗೆ ಬಿಟ್ಟು ಕೊಡಬಹುದು. ಮಂಗಳೂರು ದಕ್ಷಿಣದಲ್ಲಿ ಬೇಡ ಎನ್ನುವ ಆಗ್ರಹ ಒಂದು ಕಡೆಯಿಂದ ಬರುತ್ತಿದೆ.
ಹಿಂದುಳಿದವರ ಪ್ರಸ್ತಾಪ ಬಂದಾಗ ಮಂಗಳೂರು ದಕ್ಷಿಣದಲ್ಲ್ಲಿ ಕೇಳಿ ಬರುವ ಹೆಸರು ಅಮೃತ್ ಕದ್ರಿಯವರದು. ಸಮಾಜ ಸೇವಾ ಚಟುವಟಿಕೆಯಲ್ಲಿ ಈಗಾಗಲೆ ಗುರುತಿಸಿಕೊಂಡಿರುವ ಅಮೃತ್ ಕದ್ರಿ, ಕಾಂಗ್ರೆಸ್ ನ ಹಿಂದುಳಿದ ವರ್ಗದ ರಾಜ್ಯ ಘಟಕದ ಕಾರ್ಯದಶಿರ್ಯಯಾಗಿ ಪಕ್ಷದ ಸಂಘಟನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಮತ್ತೊಂದು ಪ್ರಮುಖ ಅಂಶ ಎಂದರೆ ವೀರಪ್ಪ ಮೊಯ್ಲಿಯ ಬಳಿಕ ದೇವಾಡಿಗ ಸಮುದಾಯದಲ್ಲಿ ನಾಯಕತ್ವದ ಗುಣಗಳನ್ನು ತೋರಿಸುತ್ತಿರುವ ಅಮೃತ್ ಕದ್ರಿ, ಮೊಯ್ಲಿಯ ಬಳಿಕ ದೇವಾಡಿಗರಿಗೆ ಸಿಗದ ಮಾನ್ಯತೆಯ ಅಪವಾದ ದೂರ ಮಾಡಲಾದರೂ ಅಮೃತ ಕದ್ರಿಯವರಿಗೆ ಅವಕಾಶ ದೊರಕಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ದೇವಾಡಿಗರಿಗೆ ಆದ್ಯತೆಯ ರೂಪದಲ್ಲಿ ಅಮೃತ್ ಕದ್ರಿ ಸ್ಥಾನಮಾನ ಗಿಟ್ಟಿಸುವ ಲಕ್ಷಣಗಳು ಗೋಚರಿಸುತ್ತವೆ.
ಬೆಳ್ತಂಗಡಿಯಲ್ಲಿ ಈಗಾಗಲೇ ಬಿಲ್ಲವ ನಾಯಕ ವಸಂತ ಬಂಗೇರರು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಆಸಕ್ತಿ ತೋರದೇ ಇದ್ದರೆ, ಉತ್ತರಾಧಿಕಾರಿಯಾಗಿ ಗೋಚರಿಸುತ್ತಿರುವುದು ಹರೀಶ್ ಕುಮಾರ್ ಅವರೂ ಕೂಡ ಬಿಲ್ಲವರೇ. ವಿನಯಕುಮಾರ ಸೊರಕೆಯವರ ಹೆಸರು ಕೂಡ ಇದೇ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಅವರೂ ಕೂಡ ಬಿಲ್ಲವರೆ. ಅಲ್ಲಿಗೆ ಬಿಲ್ಲವ ಕೋಟಾ ತುಂಬುತ್ತದೆ. ಸೊರಕೆಯವರ ಹೆಸರು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲೂ ಇದೆ. ಟೋಟಲಿ ಕಾಂಗ್ರೆಸ್ ನಲ್ಲಿ ಜಾತಿ ರಾಜಕಾರಣ ಬಲವಾಗುತ್ತಿದೆ ಎನ್ನುವುದು ಖಚಿತವಾಗುತ್ತಿದೆ.
Click this button or press Ctrl+G to toggle between Kannada and English