ಕೋಲಾರ: ನೂತನ ಮುಖ್ಯಮಂತ್ರಿ ಕುರಿತು ಏನನ್ನೂ ಈಗಲೇ ಹೇಳುವುದಿಲ್ಲ. ಕಾರ್ತಿಕ ಮಾಸ ಕಳೆದ ನಂತರ ಹೇಳುತ್ತೇನೆ. ಆಶ್ವೀಜ ಮಾಸ ನಂತರ ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ ಆಗಲಿದೆ ಎಂದು ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಅಶುಭ ನುಡಿಗಳು ಈಗ ಬೇಡ. ಕೆರೆ ಕಟ್ಟೆಗಳು ತುಂಬಿ ಜಲಗಂಡಾಂತರ ಇನ್ನೂ ಇದೆ ಎಂದಿದ್ದಾರೆ.
ನಾವು ಯಡಿಯೂರಪ್ಪ ಅವರನ್ನು ಉಳಿಸಿ ಅಂತ ಹೇಳಲಿಲ್ಲ. ಬದಲಾಗಿ ಸ್ವಾಮೀಜಿಗಳು ಬೀದಿಗೆ ಬಂದಾಗ, ಕೆಂದ್ರದ ನಾಯಕರು ಬಂದು ಗುರುಗಳಿಗೆ ಆಶ್ವಾಸನೆ ಕೊಡಬಹುದಿತ್ತು. ಆದರೆ ಮಠಾಧೀಶರಿಗೆ ಅಗೌರವ ತೋರಿದ್ದಾರೆ. ಮಠಾಧೀಶರು, ನಾಯಕರು ಬೀದಿಗೆ ಬಂದು ಹೋರಾಟ ಮಾಡಿದ್ದರು. ಆದರೆ ಮಠಾಧೀಶರನ್ನು ನಡೆಸಿಕೊಂಡಿರುವ ರೀತಿ ಸರಿಯಿಲ್ಲ ಎಂದು ಬೇಸರಿಸಿದರು.
ರಾಜ ಮಹಾರಾಜರಿಗಿಂತ ಗುರುಗಳಿಗೆ ಬೆಲೆ ಇದೆ. ಆದರೆ ಗುರುಗಳಿಗೆ ನೋವಾಗುವಂತೆ ನಡೆದುಕೊಂಡಿದ್ದು ಸರಿಯಲ್ಲ. ಮಠಾಧೀಶರು ರಾಜಕಾರಣ ಮಾಡಿಲ್ಲ. ಆದರೆ ಕೇಂದ್ರ ಹಾಗೂ ಹೈಕಮಾಂಡ್ ಗುರುಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಮಠಾಧೀಶರ ಅಹವಾಲುಗಳನ್ನು ಆಲಿಸದೇ ಇರುವುದು ಬೇಸರ ತಂದಿದೆ. ಖಾವಿಗಳಿಗೆ ಈ ದೇಶದಲ್ಲಿ ಏನು ಬೆಲೆ ಇದೆ ಎಂದು ಪ್ರಶ್ನಿಸಿದರು. ಇನ್ನೂ ಸಾಕಷ್ಟು ಹೇಳುವ ವಿಚಾರ ಹೇಳುವುದಿದೆ. ಆದರೆ ಇದು ಸಂದರ್ಭವಲ್ಲ ಸಮಯ ಬಂದಾಗ ಹೇಳುತ್ತೇನೆ ಎಂದಿದ್ದಾರೆ.
Click this button or press Ctrl+G to toggle between Kannada and English