ಜನಜಾಗೃತಿ ವೇದಿಕೆ: ವಾರ್ಷಿಕ ವರದಿ ಬಿಡುಗಡೆ

10:19 PM, Saturday, July 31st, 2021
Share
1 Star2 Stars3 Stars4 Stars5 Stars
(No Ratings Yet)
Loading...

dharmasthalaಉಜಿರೆ: ಜನಜಾಗೃತಿ ವೇದಿಕೆಯ ಬೆಳ್ತಂಗಡಿ ಪ್ರಾದೇಶಿಕ ವಿಭಾಗದ ವಾರ್ಷಿಕ ವರದಿ ಮತ್ತು ಪ್ರಾಕೃತಿಕ ದುರಂತಗಳು ಹಾಗೂ ನಿರ್ವಹಣೆ ಬಗ್ಯೆ ಮಾಹಿತಿ ಕೈಪಿಡಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಜನಜಾಗೃತಿ ವೇದಿಕೆಯ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.

ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಸೇವಾ ಕಾರ್ಯ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಕೂಡಾ ಸ್ಥಳೀಯರ ಸಹಕಾರದೊಂದಿಗೆ ಉತ್ತಮವಾಗಿ ಮೂಡಿ ಬರುತ್ತಿವೆ. ಕೊರೊನಾದಿಂದಾಗಿ ಮದ್ಯವರ್ಜನ ಶಿಬಿರಗಳು ಸ್ಥಗಿತಗೊಂಡರೂ ನವಜೀವನ ಸಮಿತಿಗಳನ್ನು ಬಲಪಡಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಪ್ರಸಕ್ತ ವರ್ಷ 150 ಮದ್ಯವರ್ಜನ ಶಿಬಿರಗಳ ಕ್ರಿಯಾ ಯೋಜನೆ ರೂಪಿಸಿದರೂ ಕೊರೊನಾದಿಂದಾಗಿ 145 ಶಿಬಿರಗಳನ್ನು ಆಯೋಜಿಸಲು ಅನನುಕೂಲವಾಗಿದೆ. ಆದರೆ 5 ವಿಶೇಷ ಶಿಬಿರಗಳ ಮೂಲಕ 322 ಮಂದಿಗೆ ಚಿಕಿತ್ಸೆ ಮತ್ತು ಸಲಹೆ ನೀಡಲಾಗಿದೆ ಎಂದು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಫಾಯ್ಸ್ ಮಾಹಿತಿ ನೀಡಿದರು. ಈ ವರೆಗೆ ಒಟ್ಟು 1471 ಮದ್ಯವರ್ಜನ ಶಿಬಿರಗಳ ಮೂಲಕ 1,02,110 ಮದ್ಯವ್ಯಸನಿಗಳಿಗೆ ಮದ್ಯವರ್ಜನೆ ಬಗ್ಯೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜನಜಾಗೃತಿ ವೇದಿಕೆಯ ಆಡಳಿತ ಸಮಿತಿ ಸದಸ್ಯರಾದ ಬೆಂಗಳೂರಿನ ವಿ. ರಾಮಸ್ವಾಮಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಎಸ್. ಎನ್. ಯೋಜನಾಧಿಕಾರಿಗಳಾದ ಮೋಹನ್ ಮತ್ತು ಜೈವಂತ ಪಟಗಾರ ಹಾಗೂ ಸಹಾಯಕ ಪ್ರಬಂಧಕಿ ಭಾಗೀರಥಿ, ಯನ್. ಉಪಸ್ಥಿತರಿದ್ದರು.

ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ: ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ

ಉಜಿರೆ: ಕಳೆದ ಆರ್ಥಿಕ ವರ್ಷದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ 525 ತರಬೇತಿ ಕಾರ್ಯಕ್ರಮಗಳ ಮೂಲಕ 13,061 ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ ಎಂದು ಉಜಿರೆಯಲ್ಲಿರುವ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಕೇಂದ್ರೀಯ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇವರಲ್ಲಿ ಶೇ. 71 ರಷ್ಟು ಮಂದಿ ಅಂದರೆ 9,237 ಮಹಿಳೆಯರು. 1982ರಲ್ಲಿ ತರಬೇತಿ ಸಂಸ್ಥೆ ಆರಂಭವಾದ ಬಳಿಕ ಒಟ್ಟು 16390 ತರಬೇತಿ ಕಾರ್ಯಕ್ರಮಗಳ ಮೂಲಕ 5,02,720 ಮಂದಿಗೆ ಸ್ವ-ಉದ್ಯೋಗ ತರಬೇತಿ ನೀಡಿದ್ದು ಇವರಲ್ಲಿ ಶೇ.45 ರಷ್ಟು ಅಂದರೆ 2,28,514 ಮಂದಿ ಮಹಿಳೆಯರು.

ಕಳೆದ ವರ್ಷದಲ್ಲಿ ತರಬೇತಿ ಪಡೆದ 9568 ಮಂದಿ ನಿರುದ್ಯೋಗಿಗಳು ಸ್ವ-ಉದ್ಯೋಗ ಪ್ರಾರಂಭಿಸಿದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇವರಲ್ಲಿ 4,391 ಮಂದಿಗೆ ವಿವಿಧ ಬ್ಯಾಂಕುಗಳು 88.76 ಕೋಟಿ ರೂ. ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿವೆ.

1982ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ ತರಬೇತಿ ಸಂಸ್ಥೆಯ ಶಾಖೆಗಳು ಇಂದು ದೇಶದೆಲ್ಲೆಡೆ ನಿರುದ್ಯೋಗಿ ಯುವ ಜನತೆಗೆ ತರಬೇತಿ ನೀಡಿ ಸ್ವ-ಉದ್ಯೋಗ ಆರಂಭಿಸಲು ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತಿವೆ.. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದಲೂ ತರಬೇತಿ ಸಂಸ್ಥೆಗಳು ಮಾನ್ಯತೆ ಹೊಂದಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English