ಮಂಗಳೂರು : ನಗರದ ಕಾಲೇಜು ವಿದ್ಯಾರ್ಥಿಯೊಬ್ಬ ಪ್ರೇಯಸಿ ಜತೆ ತಿರುಗಾಡುವ ಉದ್ದೇಶದಿಂದ ತನ್ನ ಗುರುತು ಪತ್ತೆಯಾಗದಂತೆ ಜನರ ಕಣ್ಣಿಗೆ ಮಣ್ಣೆರಚಲು ಬುರ್ಖಾ ವೇಷ ಧರಿಸಿ ಕೊನೆಗೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ಘಟನೆ ಶುಕ್ರವಾರ ನಡೆದಿದೆ. ಪುತ್ತೂರಿನ ವೃತ್ತಿಪರ ಕಾಲೇಜೊಂದರ ವಿದ್ಯಾರ್ಥಿ ಅಜಿತ್ ಎಂಬಾತ ತನ್ನ ಪ್ರೇಯಸಿ, ನಗರದ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಕರೆದುಕೊಂಡು ನಗರದ ಮಾಲ್ ಒಂದಕ್ಕೆ ಬಂದಿದ್ದ. ಯುವತಿ ಜತೆ ಒಂದಷ್ಟು ಕಾಲ ಯಾರಿಗೂ ಕಾಣದಂತೆ ಸುತ್ತಾಡುವ ಯೋಚನೆ ಆತನದ್ದಾಗಿತ್ತು. ಇದಕ್ಕಾಗಿ ಆತ ಕಂಡುಕೊಂಡ ಮಾರ್ಗವೇ ಬುರ್ಖಾಧಾರಣೆ. ಈ ವಿಧಾನವೇ ಯುವಕನ ಎಡವಟ್ಟಿಗೆ ಕಾರಣವಾಗಿದೆ.
ಶುಕ್ರವಾರ ಮಧ್ಯಾಹ್ನ ಬುರ್ಖಾ ಧರಿಸಿ ಯುವತಿಯೊಂದಿಗೆ ಮಾಲ್‌ನಲ್ಲಿ ಸುತ್ತಾಡುತ್ತಿದ್ದಾಗ ಅಲ್ಲಿ ಕೆಲವು ಯುವಕರು ಹಾಗೂ ಸೆಕ್ಯುರಿಟಿ ಗಾರ್ಡ್‌ಗಳು ಇವರನ್ನು ಗಮನಿಸಿ ಸಂಶಯದಿಂದ ನೋಡಿದ್ದಾರೆ. ಇದಕ್ಕೆ ಕಾರಣ ಆತ ಬುರ್ಖಾ ಧರಿಸಿದ್ದರೂ ಕಾಲಿಗೆ ಹಾಕಿದ ಶೂ ಆತ ಯುವಕನೇ ಎಂಬುದನ್ನು ತೋರಿಸುತ್ತಿತ್ತು ಅಲ್ಲದೆ ಯುವಕನ ನಡೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು. ಅಕ್ಕಪಕ್ಕದಲ್ಲಿ ನಿಂತಿರುವವರು ಆತನನ್ನೇ ದೃಷ್ಟಿಸಿ ನೋಡುತ್ತಿದ್ದುದರಿಂದ ಯುವಕ ಹಾಗೂ ಯುವತಿ ಹೆದರಿ ಅಲ್ಲಿಂದ ಕಾಲ್ಕಿತ್ತರು. ಆದರೆ ಆತನ ನಡವಳಿಕೆಯನ್ನು ಗಮನಿಸಿದವರು ಸಂಶಯದಿಂದ ಅಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದರು. ಹಾಗೆ ಪೊಲೀಸರು ಬುರ್ಖಾಧಾರಿಯ ವಿಚಾರಣೆ ನಡೆಸಿದಾಗ ಆತ ಬುರ್ಖಾ ಧರಿಸಿದ ಯುವಕ ಎಂಬ ವಿಚಾರ ತಿಳಿಯಿತು.
ತಕ್ಷಣ ಆತನನ್ನು ಬರ್ಕೆ ಠಾಣೆಗೆ ಕರೆದೊಯ್ಯಲಾಯಿತು. ಬಳಿಕ ಯುವಕ ಹಾಗೂ ಯುವತಿಯ ಹೆತ್ತವರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಪಡೆದು ಬಿಡುಗಡೆಗೊಳಿಸಲಾಗಿದೆ. ಪರಿಚಯಸ್ಥರಿಂದ ಮುಖ ಮುಚ್ಚಿಕೊಳ್ಳಲು ಈರೀತಿ ಮಾಡಿದ್ದಾಗಿ ಯುವಕ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English