ಮಂಗಳೂರು : ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬ, ಧಾರ್ಮಿಕ ಉತ್ಸವಗಳಿಗೆ ಒಂದೊಂದು ವಿಶೇಷ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಹಿಂದೂ ಧರ್ಮದಲ್ಲಿ ಬರುವ ಹಬ್ಬಗಳ ಸಾಲು ಎಂದರೆ ಆಷಾಢ ಮಾಸದಿಂದ ಕಾರ್ತಿಕ ಮಾಸದ ಈ ನಾಲ್ಕು ತಿಂಗಳು ಬೇರೆ ಬೇರೆ ಹಬ್ಬಗಳ ಆಚರಣೆ ಮಾಡುತ್ತೇವೆ ಈ ನಾಲ್ಕು ತಿಂಗಳ ಅಂದರೆ ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ.
ಚಾತುರ್ಮಾಸದ ಕಾಲ ಮತ್ತು ದೇವತೆ
ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ.
ದಕ್ಷಿಣಾಯನವು ದೇವರ ರಾತ್ರಿಯಾಗಿದ್ದು ಉತ್ತರಾಯಣವು ಹಗಲಾಗಿದೆ. ಕರ್ಕ ಸಂಕ್ರಾಂತಿಗೆ ಉತ್ತರಾಯಣವು ಪೂರ್ಣವಾಗುತ್ತದೆ ಮತ್ತು ದಕ್ಷಿಣಾಯನವು ಅಂದರೆ ದೇವರ ರಾತ್ರಿಯು ಪ್ರಾರಂಭವಾಗುತ್ತದೆ. ಕರ್ಕ ಸಂಕ್ರಾಂತಿಯು ಆಷಾಢ ಮಾಸದಲ್ಲಿ ಬರುತ್ತದೆ. ಆದುದರಿಂದಲೇ ಆಷಾಢ ಶುಕ್ಲ ಏಕಾದಶಿಯನ್ನು ‘ಶಯನೀ ಏಕಾದಶಿ’ ಎಂದು ಕರೆಯಲಾಗಿದೆ; ಏಕೆಂದರೆ ‘ಆ ದಿನ ದೇವರು ನಿದ್ರಿಸುತ್ತಾರೆ’ ಎನ್ನುವ ನಂಬಿಕೆಯಿದೆ. ಕಾರ್ತಿಕ ಶುಕ್ಲ ಏಕಾದಶಿಯಂದು ದೇವರು ನಿದ್ರೆಯಿಂದ ಏಳುತ್ತಾರೆ. ಆದ್ದರಿಂದಲೇ ಅದನ್ನು ‘ಪ್ರಬೋಧಿನಿ (ಬೋಧಿನಿ, ದೇವೋತ್ಥಾನಿ) ಏಕಾದಶಿ’ ಎನ್ನುತ್ತಾರೆ. ವಾಸ್ತವದಲ್ಲಿ ದಕ್ಷಿಣಾಯನವು ಆರು ತಿಂಗಳುಗಳದ್ದಾಗಿರುವುದರಿಂದ ದೇವರ ರಾತ್ರಿಯೂ ಅಷ್ಟೇ ಕಾಲಾವಧಿಯದ್ದಾಗಿರಬೇಕಾಗಿತ್ತು. ಆದರೆ ಬೋಧಿನಿ ಏಕಾದಶಿಯವರೆಗೆ ನಾಲ್ಕು ತಿಂಗಳು ಮಾತ್ರ ಪೂರ್ಣವಾಗುತ್ತವೆ. ಇದರ ಅರ್ಥ ಒಂದು ತೃತೀಯಾಂಶದಷ್ಟು ರಾತ್ರಿ ಕಾಲ ಬಾಕಿ ಇರುವಾಗಲೇ ದೇವತೆಗಳು ಎದ್ದು ತಮ್ಮ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸುತ್ತಾರೆ.
‘ಬ್ರಹ್ಮದೇವನ ನವಸೃಷ್ಟಿಯ ನಿರ್ಮಿತಿಯ ಕಾರ್ಯವು ನಡೆಯುತ್ತಿರುವಾಗ ಪಾಲನಕರ್ತನಾದ ವಿಷ್ಣುವು ನಿಷ್ಕ್ರಿಯನಾಗಿರುತ್ತಾನೆ; ಆದುದರಿಂದ ಚಾತುರ್ಮಾಸವನ್ನು ವಿಷ್ಣುಶಯನವೆಂದು ಕರೆಯಲಾಗಿದೆ. ಆಗ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ನಿದ್ರಿಸುತ್ತಾನೆಂದು ತಿಳಿಯಲಾಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ವಿಷ್ಣುಶಯನವನ್ನು ಮತ್ತು ಕಾರ್ತಿಕ ಶುಕ್ಲ ಏಕಾದಶಿಯ ನಂತರ ಅಂದರೆ ದ್ವಾದಶಿಯಂದು ವಿಷ್ಣುಪ್ರಬೋಧೋತ್ಸವವನ್ನು ಆಚರಿಸುತ್ತಾರೆ.’
ಚಾತುರ್ಮಾಸದ ಮಹತ್ವ
ದೇವರ ಈ ನಿದ್ರಾಕಾಲದಲ್ಲಿ ಅಸುರರು ಪ್ರಬಲರಾಗುತ್ತಾರೆ ಮತ್ತು ಮಾನವರಿಗೆ ತೊಂದರೆಗಳನ್ನು ಕೊಡುತ್ತಾರೆ. ‘ಅಸುರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಒಂದಲ್ಲ ಒಂದು ವ್ರತವನ್ನು ಅವಶ್ಯವಾಗಿ ಮಾಡಬೇಕು’, ಹೀಗೆ ಧರ್ಮಶಾಸ್ತ್ರವು ಹೇಳುತ್ತದೆ –
ವಾರ್ಷಿಕಾಂಶ್ಚತುರೋ ಮಾಸಾನ್ ವಾಹಯೇತ್ ಕೇನಚಿನ್ನರಃ|
ವ್ರತೇನ ನ ಚೇದಾಪ್ನೋತಿ ಕಿಲ್ಮಿಷಂ ವತ್ಸರೋದ್ಭವಮ್||
ಅರ್ಥ – ಪ್ರತಿವರ್ಷ ಚಾತುರ್ಮಾಸದಲ್ಲಿ ಮನುಷ್ಯನು ಯಾವುದಾದರೂಂದು ವ್ರತವನ್ನು ಅವಶ್ಯ ಮಾಡಬೇಕು; ಇಲ್ಲದಿದ್ದರೆ ಅವನಿಗೆ ಸಂವತ್ಸರೋದ್ಭವವೆಂಬ ದೋಷ ತಗಲುತ್ತದೆ.
ಈ ಕಾಲಾವಧಿಯಲ್ಲಿ ಮಳೆಗಾಲವಿರುವುದರಿಂದ ಧರಣಿಯ ರೂಪವು ಬದಲಾಗಿರುತ್ತದೆ. ಮಳೆ ಹೆಚ್ಚಿರುವುದರಿಂದ ಬಹಳಷ್ಟು ಸ್ಥಳಾಂತರವಾಗುವುದಿಲ್ಲ. ಆದುದರಿಂದಲೇ ಚಾತುರ್ಮಾಸ ವ್ರತವನ್ನು ಒಂದೇ ಸ್ಥಳದಲ್ಲಿದ್ದು ಮಾಡಬೇಕೆಂಬ ರೂಢಿಯು ಬಂದಿದೆ. ಮನುಷ್ಯನ ಮಾನಸಿಕ ರೂಪವೂ ಬದಲಾಗಿರುತ್ತದೆ. ದೇಹದಲ್ಲಿನ ಜೀರ್ಣಾಂಗ ಇತ್ಯಾದಿಗಳ ಕಾರ್ಯವೂ ಭಿನ್ನರೀತಿಯಲ್ಲಿ ನಡೆದಿರುತ್ತದೆ. ಅದಕ್ಕನುಸಾರ ಈ ಕಾಲದಲ್ಲಿ ಗೆಡ್ಡೆ, ಬದನೆ, ಹುಣಸೇಹಣ್ಣು ಇತ್ಯಾದಿ ಖಾದ್ಯಪದಾರ್ಥಗಳನ್ನು ತಿನ್ನಬಾರದೆಂದು ಹೇಳಲಾಗಿದೆ.
ಈ ಪರಮಾರ್ಥಕ್ಕೆ ಪೂರಕವಾಗಿರುವ ವಿಧಿವಿಧಾನಗಳು ಮತ್ತು ಪ್ರಪಂಚಕ್ಕೆ ಮಾರಕ ಸಂಗತಿಗಳ ನಿಷೇಧವು ಚಾತುರ್ಮಾಸದ ವೈಶಿಷ್ಟ್ಯವಾಗಿದೆ. ಚಾತುರ್ಮಾಸದಲ್ಲಿನ ಶ್ರಾವಣ ಮಾಸವು ವಿಶೇಷ ಮಹತ್ವದ್ದಾಗಿದೆ. ಭಾದ್ರಪದ ಕೃಷ್ಣ ಪಕ್ಷದಲ್ಲಿ ಮಹಾಲಯ ಶ್ರಾದ್ಧಗಳನ್ನು ಮಾಡುತ್ತಾರೆ. ಚಾತುರ್ಮಾಸದಲ್ಲಿ ಹಬ್ಬ ಮತ್ತು ವ್ರತಗಳು ಹೆಚ್ಚಿನ ಪ್ರಮಾಣದಲ್ಲಿರುವುದರ ಕಾರಣಗಳು: ಶ್ರಾವಣ, ಭಾದ್ರಪದ, ಆಶ್ವಯುಜ ಮತ್ತು ಕಾರ್ತಿಕ ಈ ನಾಲ್ಕು ತಿಂಗಳುಗಳಲ್ಲಿ (ಚಾತುರ್ಮಾಸದಲ್ಲಿ) ಪೃಥ್ವಿಯ ಮೇಲೆ ಬರುವ ಲಹರಿಗಳಲ್ಲಿ ತಮೋಗುಣವು ಹೆಚ್ಚಿರುವ ಯಮಲಹರಿಗಳ ಪ್ರಮಾಣವು ಅಧಿಕವಾಗಿರುತ್ತದೆ. ಅವುಗಳನ್ನು ಎದುರಿಸಲು ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ. ಹಬ್ಬ ಮತ್ತು ವ್ರತಗಳ ಮೂಲಕ ಸಾತ್ತ್ವಿಕತೆಯು ಹೆಚ್ಚುವುದರಿಂದ ಚಾತುರ್ಮಾಸದಲ್ಲಿ ಹೆಚ್ಚು ಹಬ್ಬ ಮತ್ತು ವ್ರತಗಳಿವೆ. ಶಿಕಾಗೋ ಮೆಡಿಕಲ್ ಸ್ಕೂಲ್‌ನ ಸ್ತ್ರೀರೋಗತಜ್ಞರಾದ ಪ್ರೊಫೆಸರ್ ಡಾ.ಡಬ್ಲ್ಯು.ಎಸ್.ಕೋಗರ್‌ರು ನಡೆಸಿದ ಸಂಶೋಧನೆಯ ಪ್ರಕಾರ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ ಈ ನಾಲ್ಕು ತಿಂಗಳಿನಲ್ಲಿ, ವಿಶೇಷವಾಗಿ ಭಾರತದ ಸ್ತ್ರೀಯರಲ್ಲಿ ಗರ್ಭಕೋಶಕ್ಕೆ ಸಂಬಂಧಿಸಿದ ರೋಗಗಳು ಪ್ರಾರಂಭವಾಗುತ್ತವೆ ಅಥವಾ ಹೆಚ್ಚುತ್ತವೆ, ಎಂಬುದು ಕಂಡುಬಂದಿತು. ಚಾತುರ್ಮಾಸದಲ್ಲಿ ನಾಲ್ಕು ತಿಂಗಳುಗಳ ಕಾಲ ವ್ರತಸ್ಥರಾಗಿರಬೇಕಾಗಿರುತ್ತದೆ.
ಚಾತುರ್ಮಾಸದ ವ್ರತಗಳು
ಸಾಮಾನ್ಯ ಜನರು ಚಾತುರ್ಮಾಸದಲ್ಲಿ ಯಾವುದಾದರೊಂದು ವ್ರತವನ್ನು ಮಾಡುತ್ತಾರೆ. ಪರ್ಣಭೋಜನ (ಎಲೆಯಲ್ಲಿ ಊಟ ಮಾಡುವುದು), ಏಕಭೋಜನ (ಒಂದು ಹೊತ್ತು ಊಟ ಮಾಡುವುದು), ಅಯಾಚಿತ (ಯಾಚಿಸದೇ ಸಿಕ್ಕಷ್ಟು ಊಟ ಮಾಡುವುದು), ಏಕವಾಡಿ (ಒಂದೇ ಬಾರಿ ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಊಟ ಮಾಡುವುದು), ಮಿಶ್ರಭೋಜನ (ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಅವೆಲ್ಲವನ್ನೂ ಕಲಸಿ ತಿನ್ನುವುದು) ಮುಂತಾದ ಭೋಜನದ ನಿಯಮಗಳನ್ನು ಪಾಲಿಸಬಹುದು.
ಅನೇಕ ಸ್ತ್ರೀಯರು ಚಾತುರ್ಮಾಸದಲ್ಲಿ ‘ಧರಣೆ-ಪಾರಣೆ’ ಎಂಬ ಹೆಸರಿನ ವ್ರತವನ್ನು ಮಾಡುತ್ತಾರೆ. ಈ ವ್ರತದಲ್ಲಿ ಒಂದು ದಿನ ಭೋಜನ ಮತ್ತು ಮರುದಿನ ಉಪವಾಸ ಹೀಗೆ ಸತತವಾಗಿ ನಾಲ್ಕು ತಿಂಗಳು ಮಾಡಬೇಕಾಗುತ್ತದೆ. ಅನೇಕ ಸ್ತ್ರೀಯರು ಚಾತುರ್ಮಾಸದಲ್ಲಿ ಒಂದು ಅಥವಾ ಎರಡು ಧಾನ್ಯಗಳ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಕೆಲವರು ಒಪ್ಪೊತ್ತು ಊಟ ಮಾಡುತ್ತಾರೆ. ನಾನಾ ಭಾಗಗಳಲ್ಲಿ ಚಾತುರ್ಮಾಸದಲ್ಲಿ ವಿವಿಧ ಆಚಾರಗಳು ಕಂಡು ಬರುತ್ತವೆ.
ವರ್ಜ್ಯಾವರ್ಜ್ಯ (ಉಪಯೋಗಿಸಬಹುದಾದ ಮತ್ತು ಉಪಯೋಗಿಸಬಾರದ ವಸ್ತುಗಳು
ವರ್ಜ್ಯ (ಉಪಯೋಗಿಸಬಾರದ ವಸ್ತುಗಳು)
ಚಾತುರ್ಮಾಸದಲ್ಲಿ ಪ್ರಾಣಿಗಳ ಮೂಳೆಯಿಂದ ತಯಾರಿಸಿದ ಸುಣ್ಣ, ಚರ್ಮಪಾತ್ರೆಯಲ್ಲಿನ ನೀರು, ಗಜಲಿಂಬೆ, ಮಹಾಳುಂಗ, ವೈಶ್ವದೇವ ಮಾಡದ ಮತ್ತು ವಿಷ್ಣುವಿಗೆ ಅರ್ಪಿಸದಿರುವ ಆಹಾರ, ಚನ್ನಂಗಿಬೇಳೆ (ಮಸ್ಸೂರಿ ಬೇಳೆ), ಮಾಂಸ, ಬಿಳಿ ಅವರೆಕಾಯಿ, ಅವರೆಕಾಯಿ, ಅಲಸಂದೆ, ಉಪ್ಪಿನಕಾಯಿ, ಬದನೆ, ಕಲ್ಲಂಗಡಿ, ಬಹಳಷ್ಟು ಬೀಜವಿದ್ದ ಅಥವಾ ನಿರ್ಬೀಜ ಫಲ, ಮೂಲಂಗಿ, ಹಾಲುಗುಂಬಳ, ಬೋರೇಹಣ್ಣು, ನೆಲ್ಲಿಕಾಯಿ, ಹುಣಸೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳು ವರ್ಜ್ಯ. ಮಂಚದ ಮೇಲೆ ಮಲಗುವುದು. ಋತುಕಾಲ ಬಿಟ್ಟು ಸ್ತ್ರೀಸಂಗ. ಪರಾನ್ನ. ವಿವಾಹ ಮತ್ತು ಇತರ ತತ್ಸಮ ಕಾರ್ಯಗಳು. ಚಾತುರ್ಮಾಸದಲ್ಲಿ ಸಾಧು-ಸಂನ್ಯಾಸಿಗಳಿಗೆ ಕೂದಲನ್ನು ಕತ್ತರಿಸುವುದು ನಿಷೇಧಿಸಲಾಗಿದೆ. ಅವರು ನಾಲ್ಕು ತಿಂಗಳುಗಳ ಕಾಲ ಅಥವಾ ಕನಿಷ್ಠ ಎರಡು ತಿಂಗಳಾದರೂ ಒಂದೇ ಸ್ಥಳದಲ್ಲಿ ಇರಬೇಕು ಎಂದು ಧರ್ಮಸಿಂಧು ಮತ್ತು ಇತರ ಕೆಲವು ಧರ್ಮಗ್ರಂಥಗಳಲ್ಲಿಯೂ ಹೇಳಲಾಗಿದೆ.’
ಅವರ್ಜ್ಯ (ಉಪಯೋಗಿಸಬಹುದಾದ ವಸ್ತುಗಳು)
ಚಾತುರ್ಮಾಸದಲ್ಲಿ ಹವಿಷ್ಯಾನ್ನವನ್ನು ಸೇವಿಸಬೇಕೆಂದು ಹೇಳಲಾಗಿದೆ. ಅಕ್ಕಿ, ಹೆಸರು, ಜವೆ, ಎಳ್ಳು, ಬಟಾಣಿ, ಗೋಧಿ, ಸಮುದ್ರದ ಉಪ್ಪು, ಹಸುವಿನ ಹಾಲು, ಮೊಸರು, ತುಪ್ಪ, ಹಲಸು, ಮಾವು, ತೆಂಗಿನಕಾಯಿ, ಬಾಳೆಹಣ್ಣು ಮುಂತಾದ ಪದಾರ್ಥಗಳನ್ನು ಹವಿಷ್ಯಾನ್ನಗಳೆಂದು ತಿಳಿಯಬೇಕು.
(ವರ್ಜ್ಯ ಪದಾರ್ಥಗಳು ರಜ-ತಮಮೋಗುಣಯುಕ್ತವಾಗಿರುತ್ತವೆ ಮತ್ತು ಹವಿಷ್ಯಾನ್ನಗಳು ಸತ್ತ್ವಗುಣಪ್ರಧಾನವಾಗಿರುತ್ತವೆ.)
ಚಾತುರ್ಮಾಸದ ಕಾಲದಲ್ಲಿ ಹಾಕಲಾಗುವ ತಪ್ತಮುದ್ರೆ
ವೈಷ್ಣವರು ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ತಪ್ತಮುದ್ರೆಯನ್ನು ಧರಿಸಬೇಕೆಂದು ‘ರಾಮಾರ್ಚನಚಂದ್ರಿಕಾ’ ಗ್ರಂಥದಲ್ಲಿ ಹೇಳಲಾಗಿದೆ. (ಕೆಲವು ಉಪಸಂಪ್ರದಾಯಗಳ ಸ್ವಾಮಿಗಳು ಮುದ್ರೆಯನ್ನು ಬಿಸಿಮಾಡಿ ಅದನ್ನು ಇತರರ ಶರೀರದ ಮೇಲೆ ಅಚ್ಚೊತ್ತುತ್ತಾರೆ; ಇದಕ್ಕೆ ತಪ್ತಮುದ್ರೆ ಎಂದು ಹೇಳುತ್ತಾರೆ.) ತಪ್ತಮುದ್ರೆ ಬಗ್ಗೆ ಪ್ರಶಂಸೆಯ ವಿಧಿವಾಕ್ಯಗಳು ಮತ್ತು ನಿಂದನಾಪರ ನಿಷೇಧವಾಕ್ಯಗಳು ಸಾಕಷ್ಟು ಕಂಡುಬರುತ್ತವೆ. ಆದುದರಿಂದ ಶಿಷ್ಟಾಚಾರದಂತೆ ಇದರ ವ್ಯವಸ್ಥೆಯನ್ನು ಅರಿಯಬೇಕೆಂದು ಧರ್ಮಸಿಂಧುಕಾರರು ಹೇಳುತ್ತಾರೆ.
(ಆಧಾರ : ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)
(ಈ ಲೇಖನದಲ್ಲಿ ಧರ್ಮಶಾಸ್ತ್ರಕ್ಕಾನುಸಾರ ಚಾತುರ್ಮಾಸದ ವ್ರತವನ್ನು ಯಾವ ರೀತಿಯಲ್ಲಿ ಆಚರಣೆ ಮಾಡಬೇಕು ಇದರ ಬಗ್ಗೆ ತಿಳಿಸಲಾಗಿದೆ, ಆದರೆ ಪ್ರಸ್ತುತ ಕಾಲವು ಕೊರೋನಾ ಮಹಾಮಾರಿಯಿಂದಾಗಿ ಸಂಕಟಕಾಲವಾಗಿರುವುದರಿಂದ ಈ ಕಾಲದಲ್ಲಿ ಸರ್ಕಾರವು ಹೇಳಿರುವ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ ವ್ರತದ ಆಚರಣೆಯನ್ನು ಮಾಡೋಣ.
ಚಿತ್ರದಲ್ಲಿ : ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಕೊಚ್ಚಿನ್ ನ ತಿರುಮಲ ದೇವಸ್ವಂನಲ್ಲಿ ಚಾತುರ್ಮಾಸ್ಯ ವೃತ ಸ್ವೀಕರಿಸುತ್ತಿರುವುದು.
ಸಂಕಲನ – ಶ್ರೀ. ವಿನೋದ ಕಾಮತ, ವಕ್ತಾರರು ಸನಾತನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲೆ.
ಚಿತ್ರ : ಮಂಜುನೀರೇಶ್ವಾಲ್ಯ
Click this button or press Ctrl+G to toggle between Kannada and English
August 5th, 2021 at 21:06:22
Atyuttama lekhana
Lekhana baredu sahakarisida Vinod mamravarige haagu janapadakke anukulisida Manju Mam ravarige abhinandanegalu