ಮಂಗಳೂರು : ಕೊರೋನಾ ಸೋಂಕು ಬಂದ ಮೇಲಂತೂ ಖಾಸಗಿ ಆಸ್ಪತ್ರೆಗಳ ಸುಲಿಗೆಗಳಿಂದ ಜನ ಮನೆ ಮಠ ಮಾರಿ ತಮ್ಮವರನ್ನೂ ಕಳಕೊಂಡಿದ್ದಾರೆ. ಅದರಲ್ಲೂ ಸರಕಾರದ ಅಯುಷ್ಮಾನ್ ಕಾರ್ಡ್ ಇದ್ದರೂ ಅದನ್ನು ತಿರಸ್ಕರಿಸಿದ ಆಸ್ಪತ್ರೆಗಳು ಹೆಚ್ಚು ಬಿಲ್ಲು ವಸೂಲಿ ಮಾಡುತ್ತಿದ್ದವು. ಅಂತಹ ಮಂಗಳೂರಿನ ಏಳು ಖಾಸಗಿ ಆಸ್ಪತ್ರೆಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸಂತ್ರಸ್ತರು ದಾಖಲಿಸಿದ್ದ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಒಂದು ವಾರದೊಳಗೆ ರೋಗಿಗಳಿಗೆ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಸ್ವೀಕೃತಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲು ಆದೇಶಿಸಿದರು.
ನಗರದ ಅಥೆನಾ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ (ಜ್ಯೋತಿ ಸರ್ಕಲ್), ಎಸ್‌ಸಿಎಸ್ ಆಸ್ಪತ್ರೆ, ಇಂಡಿಯಾನ, ಶ್ರೀನಿವಾಸ ಆಸ್ಪತ್ರೆ, ದೇರಳಕಟ್ಟೆಯ ಕಣಚೂರು ಆಸ್ಪತ್ರೆ, ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಗಳಿಂದ ರೋಗಿಗಳಿಗೆ ಹಣ ಹಿಂದಿರುಗಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಅಥೆನಾ ಆಸ್ಪತ್ರೆಯ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಪಟ್ಟಂತೆ ರಾಜೇಶ್ ಎಂಬ ರೋಗಿಯ ಸಂಬಂಧಿಕರಿಂದ ಸಂಪೂರ್ಣ ವಿವರ ಪಡೆದ ಜಿಲ್ಲಾಧಿಕಾರಿ, ಆಸ್ಪತ್ರೆಯ ಮುಖ್ಯಸ್ಥರಲ್ಲಿ ಚಿಕಿತ್ಸೆಯ ಮಾಹಿತಿ ಕೇಳಿದರು. ಆಕ್ಸಿಜನ್ ಮಟ್ಟ ಕಡಿಮೆಯಾದಾಗ ಐಸಿಯುಗೆ ದಾಖಲಿಸುವ ಬದಲು ಡಿಲಕ್ಸ್ ರೂಮ್‌ಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಯೋಜನೆಯಡಿ ಚಿಕಿತ್ಸೆ ನೀಡದಿರಲು ಉದ್ದೇಶಪೂರ್ವಕವಾಗಿ ಮಾಡಿರುವುದು ಕಂಡುಬಂದಿದೆ. ಬಿಲ್‌ನ ಮೊತ್ತ ಪರಿಶೀಲಿಸಿ ಸರಕಾರದ ಆದೇಶದಂತೆ 50 ಸಾವಿರ ರೂ.ನ್ನು ರೋಗಿಗೆ ಹಿಂದಿರುಗಿಸಲು ಡಿಸಿ ಸೂಚಿಸಿದರು.
ಕೆಎಂಸಿ ಜ್ಯೋತಿ ಆಸ್ಪತ್ರೆಯ ವಿರುದ್ಧ ಶಂಶುದ್ದೀನ್ ಎಂಬ ರೋಗಿ ದೂರು ಸಲ್ಲಿಸಿದ್ದರು. ಆಸ್ಪತ್ರೆಯ ಸಿಬ್ಬಂದಿಯಿಂದ ಸಮಜಾಯಿಷಿ ಪಡೆದ ಜಿಲ್ಲಾಧಿಕಾರಿ ಪಾವತಿಸಿರುವ ಬಿಲ್‌ನ ಮೊತ್ತದಲ್ಲಿ ಎರಡು ಲಕ್ಷ ರೂ. ಕಳೆದು ಉಳಿದ ಹಣವನ್ನು (78 ಸಾವಿರ ರೂ.) ಹಿಂದಿರುಗಿಸಲು ಡಿಸಿ ನಿರ್ದೇಶಿಸಿದರು.
ಇಂಡಿಯಾನಾ ಆಸ್ಪತ್ರೆಯ ವಿರುದ್ಧ ನೀಡಲಾಗಿರುವ ದೂರಿಗೆ ಸಂಬಂಧಿಸಿದಂತೆ ಮುಹಮ್ಮದ್ ಕೆ. ಹುಸೈನ್ ಎಂಬ ರೋಗಿಯ ಸಂಬಂಧಿಕರಿಂದ ಜಿಲ್ಲಾಧಿಕಾರಿ ವಿವರಣೆ ಪಡೆದರು. ರೋಗಿಯನ್ನು ಕುದ್ರೋಳಿಯ ತನ್ನ ಮನೆಯಿಂದ ನೇರವಾಗಿ ಇಂಡಿಯಾನಾ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದ್ದರೂ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಜಿಲ್ಲಾಧಿಕಾರಿ ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯ ಮುಖ್ಯಸ್ಥರಿಂದ ಬಿಲ್‌ಗಳನ್ನು ಪಡೆದು, ಪರಿಶೀಲಿಸಿದರು. ಆಸ್ಪತ್ರೆಯ ಮುಖ್ಯಸ್ಥರಿಂದ 50 ಸಾವಿರ ರೂ. ಹಿಂದಿರುಗಿಸಲು ಡಿಸಿ ಸೂಚನೆ ನೀಡಿದರು.
ಮಂಗಳೂರು ನರ್ಸಿಂಗ್ ಆಸ್ಪತೆಯ ವಿರುದ್ಧ ಪದ್ಮನಾಭ ಎಂಬ ರೋಗಿ ದೂರು ನೀಡಿದ್ದು, ರೋಗಿ ಹಾಗೂ ಆಸ್ಪತ್ರೆಯ ಮುಖ್ಯಸ್ಥರಿಂದ ಜಿಲ್ಲಾಧಿಕಾರಿ ವಿವರ ಕೇಳಿದರು. ‘wound debridment’ ಎಂಬ ಚಿಕಿತ್ಸೆಯು ಯೋಜನೆಯಡಿ ಒಳಗೊಳ್ಳದೇ ಇರುವುದರಿಂದ ರೋಗಿಯು ಸಲ್ಲಿಸಿರುವ ಸಂಪೂರ್ಣ ಸುರಕ್ಷಾ ಆರೋಗ್ಯ ಕಾರ್ಡ್‌ನಡಿ ಚಿಕಿತ್ಸೆ ನೀಡಲಾಗಿರುತ್ತದೆ. ಆ ಯೋಜನೆಯಡಿ 48 ಸಾವಿರ ರೂ. ಅನುಮತಿ ದೊರೆತಿದ್ದು, ಉಳಿದ 18 ಸಾವಿರ ರೂ.ನ್ನು ರೋಗಿ ಕಡೆಯವರು ಪಾವತಿಸಿದ್ದಾರೆ. ಈ ಬಗ್ಗೆ 10 ಸಾವಿರ ರೂ.ನ್ನು ರೋಗಿಗೆ ಹಿಂದಿರುಗಿಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎಸ್‌ಸಿಎಸ್ ಆಸ್ಪತ್ರೆಯ ವಿರುದ್ಧ ತುಕಾರಾಮ ಎಂಬ ರೋಗಿ ದೂರು ದಾಖಲಿಸಿದ್ದಾರೆ. ರೋಗಿಯ ಪತ್ನಿ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಯೋಜನೆಯಡಿ ಸೌಲಭ್ಯ ನೀಡುವಂತೆ ಮನವಿ ಮಾಡಿದಾಗ, ‘ನಿಮ್ಮ ಡಾಕ್ಟರ್ ಯೋಜನೆಯಡಿ ನೋಂದಣಿ ಆಗಿಲ್ಲ. ಹಾಗಾಗಿ ಯೋಜನೆಯಡಿ ಸೌಲಭ್ಯ ಕೊಡಲು ಆಗುವುದಿಲ್ಲ. ಡಾಕ್ಟರ್ ಬದಲಾಯಿಸಿದರೆ ಏನಾದರೂ ತೊಂದರೆಯಾದರೆ ನೀವೇ ಜವಾಬ್ದಾರರು’ ಎಂದು ಭಯ ಹುಟ್ಟಿಸಿರುವುದಾಗಿ ಸಂತ್ರಸ್ತರು ತಿಳಿಸಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥರಲ್ಲಿ ಸಮಜಾಯಿಷಿ ಕೇಳಿದಾಗ ಉತ್ತರ ತೃಪ್ರಿದಾಯಕವಾಗಿಲ್ಲ. ಆರ್ಥಿಕ ದುರ್ಬಲರಿಗೆ ಯೋಜನೆಯಡಿ ಸೌಲಭ್ಯ ನಿರಾಕರಿಸಿರುವುದು ಸಮಂಜಸವಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರೋಗಿಯು ಆಸ್ಪತ್ರೆಗೆ ಪಾವತಿಸಿರುವ ಹಣದಲ್ಲಿ 1.50 ಲಕ್ಷ ರೂ. ಹಣ ಹಿಂದಿರುಗಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕಣಚೂರು ಆಸ್ಪತ್ರೆಯ ವಿರುದ್ಧ ಮಂಜಣ್ಣಗೌಡ ಎಂಬ ರೋಗಿಯು ದೂರು ದಾಖಲಿಸಿದ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಆಸ್ಪತ್ರೆಯ ಸಿಬ್ಬಂದಿಯು, ‘ರೋಗಿಯ ದಾಖಲಾತಿ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮಾತ್ರ ಸಲ್ಲಿಸಿದ್ದು, ಬಿಪಿಎಲ್ ಕಾರ್ಡ್ ಹೊಂದಿಲ್ಲ. ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಪಡಿತರ ಚೀಟಿಯ ಇಲೆಕ್ಟ್ರಾನಿಕ್ ಪ್ರತಿಯನ್ನು ವಾಟ್ಸ್‌ಆ್ಯಪ್ ಮೂಲಕ ಕಳಿಸಿದ್ದಾರೆ’ ಎಂದರು.
ಯೋಜನೆಯಡಿ 18 ಸಾವಿರ ರೂ. ಅನುಮತಿ ದೊರೆತಿದೆ. ಹೆಚ್ಚುವರಿ 68,750 ರೂ.ನ್ನು ರೋಗಿಯಿಂದ ಪಡೆದಿದ್ದಾರೆ. ಯೋಜನೆಯಡಿ ಹೆಚ್ಚುವರಿ ಮೊತ್ತವನ್ನು ಪಡೆಯಲು ಅವಕಾಶವಿಲ್ಲ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾ ನೋಡಲ್ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಣಚೂರು ಆಸ್ಪತ್ರೆಯ ವಿರುದ್ಧ ಸೈಯದ್ ಮಯ್ಯುದ್ದೀನ್ ಎಂಬ ರೋಗಿಯು ದೂರು ದಾಖಲಾಗಿದೆ. ಯೋಜನೆಯಡಿ ಔಷಧಿಗೆ ಹಣ ಪಾವತಿಸಲು ಅವಕಾಶವಿಲ್ಲ. ಇದು ಪೂರ್ಣ ಪ್ಯಾಕೇಜ್‌ಗಳ ಅಡಿಯಲ್ಲಿ ಸೇರಿದೆ. ರೋಗಿಯು ಪಾವತಿಸಿದ 20 ಸಾವಿರ ರೂ. ಮೊತ್ತವನ್ನು ಆಸ್ಪತ್ರೆಯು ಹಿಂದಿರುಗಿಸಲು ಡಿಸಿ ಸೂಚಿಸಿದರು.
ಶ್ರೀನಿವಾಸ ಆಸ್ಪತ್ರೆಯ ವಿರುದ್ಧ ಪಾರ್ವತಿ ಎಂಬ ರೋಗಿ ದೂರು ನೀಡಿದ್ದರು. ಸಭೆಯಲ್ಲಿ ರೋಗಿಯ ಸಂಬಂಧಿಗಳು, ‘ಆಸ್ಪತ್ರೆಯ ಬಿಲ್ಲಿಂಗ್ ಸೆಕ್ಷನ್‌ನವರು ಹೆಚ್ಚುವರಿ ಹಣ ಪಾವತಿಸಲು ಒತ್ತಡ ಹೇರಿರುವ ಬಗ್ಗೆ ಹಾಗೂ ಔಷಧಿ ಹಣವನ್ನು ಪಡೆಯುತ್ತಿದ್ದಾರೆ’ ಎಂದು ಆಪಾದಿಸಿದರು. ಇದನ್ನು ಆಲಿಸಿದ ಜಿಲ್ಲಾಧಿಕಾರಿ, ರೋಗಿಯಿಂದ ಪಡೆದ 11,067 ರೂ.ನ್ನು ಹಿಂದಿರುಗಿಸಲು ಅಧ್ಯಕ್ಷರು ಸೂಚಿಸಿದರು.
ಜಿಲ್ಲೆಯ ಎಲ್ಲ ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ರೋಗಿಗಳು ಹಣ ಪಾವತಿ ಮಾಡುವಾಗ ಬಿಲ್ ಪಡೆದುಕೊಳ್ಳುವಂತೆ ಆಸ್ಪತ್ರೆಯ ವಿಚಾರಣಾ ಕೌಂಟರ್ ಹಾಗೂ ಬಿಲ್ಲಿಂಗ್ ಕೌಂಟರ್‌ನಲ್ಲಿ ವಾರ್ಡ್‌ಗಳಲ್ಲಿ ಸ್ಟಿಕ್ಕರ್/ ಫ್ಲೆಕ್ಸ್ ಅಳವಡಿಸುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದರು.
Click this button or press Ctrl+G to toggle between Kannada and English