ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿನ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ತಲಾ ₹ 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗ ಪರಿಶಿಷ್ಟ ಜಾತಿಯ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ₹ 1.70 ಲಕ್ಷ ನೆರವು ನೀಡಲಾಗುತ್ತಿದೆ. ಈ ಮೊತ್ತದಿಂದ ಒಳ್ಳೆಯ ಮನೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಫಲಾನುಭವಿಗೆ ₹5 ಲಕ್ಷ ಅನುದಾನ ನೀಡಲು ಅನುಮತಿ ಕೋರಿ ಮುಖ್ಯಮಂತ್ರಿಯವರಿಗೆ ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.
ಒಂದು ವರ್ಷ ಕಾಲ ಇಲಾಖೆಯಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಅನಿವಾರ್ಯ ಅಲ್ಲದ ಯೋಜನೆಗಳನ್ನು ತಡೆ ಹಿಡಿಯಲಾಗುವುದು. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಉತ್ತಮವಾದ ಮನೆ, ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗುಣಮಟ್ಟದ ಆರೋಗ್ಯ ಸೌಲಭ್ಯ ಮತ್ತು ಅವರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
Click this button or press Ctrl+G to toggle between Kannada and English