ಮಂಗಳೂರು: ಸಮಗ್ರ ಅಭಿವೃದ್ಧಿಯೊಂದಿಗೆ ಜಗತ್ತಿನ ಸೂಪರ್ ಪವರ್ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತಕ್ಕೆ, ದೇಶದ ನಾಗರಿಕ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಬಹುದು, ಎಂದು ಎನ್‌ಸಿಸಿ ಯ ನೌಕಾದಳದ (5 ಕರ್ನಾಟಕ ನೌಕಾದಳ ಘಟಕ) ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಭರತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 75ನೇ ಸ್ವಾತಂತ್ರೋತ್ಸವದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಭಾರತಕ್ಕೆ ಶಿಸ್ತು, ಜವಾಬ್ದಾರಿ, ಪ್ರಾಮಾಣಿಕತೆ, ನೈತಿಕತೆಯಿರುವ ಶ್ರಮಜೀವಿ ಪ್ರಜೆಗಳ ಅಗತ್ಯವಿದೆ. ಸಮಾಜಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಕೊಡುಗೆ ನೀಡುವ ಸಂಕಲ್ಪ ತೊಡಬೇಕಿದೆ, ಎಂದರು. ಕರಾವಳಿಯ ಸ್ವಾತಂತ್ರ್ಯ ಹೋರಾಟಗಾರರಾದ ಕಾರ್ನಾಡ್ ಸದಾಶಿವರಾಯರು, ಕಮಾಲಾದೇವಿ ಚಟ್ಟೋಪಾಧ್ಯಾಯ ಮೊದಲಾದವರನ್ನು ನೆನಪಿಸಿಕೊಂಡ ಅವರು, ಕೊವಿಡ್ ಯೋಧರು, ಶಿಕ್ಷಕರು ದೇಶದ ಬೆನ್ನೆಲುಬಿದ್ದಂತೆ ಎಂದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ಪಡೆದುಕೊಂಡ ಸ್ವಾತಂತ್ರ್ಯವನ್ನು ರಕ್ಷಿಸುವ ಯುವಜನಾಂಗ ಈಗ ದೇಶಕ್ಕೆ ಮುಖ್ಯ. ವಿವಿಧ ಕ್ಷೇತ್ರಗಳಲ್ಲಿದ್ದು ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಸ್ಮರಿಸೋಣ, ಎಂದರು. ಭೂದಳ ಮತ್ತು ನೌಕಾದಳದ ವಿದ್ಯಾರ್ಥಿಗಳ ಕವಾಯತು ಗಮನ ಸೆಳೆಯಿತು.
ಪ್ರಾಧ್ಯಾಪಕರಾದ ಡಾ. ಕುಮಾರಸ್ವಾಮಿ ಎಂ ಮತ್ತು ಡಾ. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಎನ್‌ಸಿಸಿ ಅಧಿಕಾರಿಗಳಾದ ಡಾ. ಲೆಫ್ಟಿನೆಂಟ್ ಡಾ. ಯತೀಶ್ ಕುಮಾರ್ (ನೌಕಾದಳ), ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ. ಜಯರಾಜ್ ಎನ್ (ಭೂದಳ), ಎನ್‌ಎಸ್‌ಎಸ್‌ನ ಡಾ. ಸುರೇಶ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ, ಕೇಶವಮೂರ್ತಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. ಆಚರಣೆಯ ಭಾಗವಾಗಿ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
Click this button or press Ctrl+G to toggle between Kannada and English