ಸಿ ಟಿ ರವಿ ಸಲಹೆ, ದೇಶದ್ರೋಹದ ಹೇಳಿಕೆಯಾಗಿದೆ : ಬಿ ರಮಾನಾಥ ರೈ

11:52 PM, Monday, August 16th, 2021
Share
1 Star2 Stars3 Stars4 Stars5 Stars
(No Ratings Yet)
Loading...

Ramantha Raiಮಂಗಳೂರು : ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿ ಹುಕ್ಕಾ ಬಾರ್ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಲಹೆ ನೀಡಿರುವುದು  ದೇಶದ್ರೋಹದ ಹೇಳಿಕೆಯಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ರೈ ದೇಶದ ಸ್ವಾತಂತ್ರ್ಯಕ್ಕಾಗಿ ಯಾರೇ ನಾಲ್ಕು ದಿನ ಜೈಲಿಗೆ ಹೋಗಿದ್ದರೂ ಅವರನ್ನು ಅಪಮಾನ ಮಾಡುವುದು ದೇಶದ್ರೋಹ. ಅಂತಹುದರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ್ದ ನೆಹರು ಅವರನ್ನು ಅಪಮಾನ ಮಾಡುತ್ತಿರುವುದು ಅಕ್ಷಮ್ಯ ಎಂದರು.

ಮಹಾತ್ಮ ಗಾಂಧಿಯನ್ನು ಅಪಹಾಸ್ಯ ಮಾಡುವುದು, ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶಪ್ರೇಮಿ ಎನ್ನುವುದನ್ನು ಸಹಿಸಲು ಅಸಾಧ್ಯ. ಕಾಂಗ್ರೆಸ್ ಪಕ್ಷದವರನ್ನು ನೆಹರು ಕುಟುಂಬದ ಗುಲಾಮರು ಎನ್ನುತ್ತಾರೆ. ದೇವರ ದಯೆಯಿಂದ ನಾವು ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿಲ್ಲ. ಅದಾನಿ- ಅಂಬಾನಿ ಗುಲಾಮರಾಗಿಲ್ಲ. ಬಿಜೆಪಿ ಅವರು ಅವರ ಗುಲಾಮರಾಗಿದ್ದಾರೆ ಎಂದು  ಹೇಳಿದರು.

ಪುತ್ತೂರಿನ ಕಬಕದಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ ಅವರು, “ಈ ಘಟನೆಗೆ ರಾಜ್ಯ ಸರ್ಕಾರ ಹಾಗೂ ದ.ಕ ಜಿಲ್ಲಾಡಳಿತ ಹೊಣೆಯಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳಲ್ಲಿ ಒಂದು ಘರ್ಷಣೆಯೂ ನಡೆದಿಲ್ಲ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಯುವ ಕಾಂಗ್ರೆಸ್‌ ದ.ಕ ಜಿಲ್ಲಾಧ್ಯಕ್ಷ ಲುಕ್ಮಾನ್‌‌ ಬಂಟ್ವಾಳ, ಮಾಜಿ ಮೇಯರ್‌‌ ಶಶಿಧರ್‌ ಹೆಗ್ಡೆ, ಕಾಂಗ್ರೆಸ್‌ ಮುಖಂಡ ನವೀನ್‌ ಡಿಸೋಜಾ, ಹರಿನಾಥ್‌‌, ಪ್ರತಿಭಾ ಕುಳಾಯಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English