ಡಿಸೆಂಬರ್ ವೇಳೆಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗವುದು: ಆರ್ ಅಶೋಕ

12:39 AM, Tuesday, August 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka ಬೆಂಗಳೂರು : ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕಂದಾಯ ಸಚಿವ ಆರ್ ಅಶೋಕ ಅವರು ಕಿಟ್ ವಿತರಣೆ ಹಾಗೂ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯ ಆವರಣದಲ್ಲಿ ಸಾವಿರಕ್ಕೂ ಹೆಚ್ಚು ಶಾಲಾ ಸಿಬ್ಬಂದಿಗಳಿಗೆ ಸಚಿವರು ದಿನಸಿ ಕಿಟ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಅಶೋಕ,”ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ನಾನಾ ಕಠಿಣ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಒಂದು ತಿಂಗಳು ವೈದ್ಯರ ತಂಡವು ಮನೆ, ಮನೆಗೂ ಭೇಟಿ ನೀಡಿ ಕುಟುಂಬ ಸದಸ್ಯರ ಆರೋಗ್ಯ ವಿಚಾರಣೆ ಮತ್ತು ತಪಾಸಣೆ ಮಾಡಲಿದೆ. ಕೋವಿಡ್ ನಿಂದಾಗಿ ಹಲವು ವಲಯಗಳಿಗೆ ತೊಂದರೆಯಾದಂತೆ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಿಗೂ ಸಾಕಷ್ಟು ಸಮಸ್ಯೆಯಾಗಿದೆ. ಆಲೆಗಳು ತೆರೆಯದ ಕಾರಣ ಅವರ ಜೀವನವು ಡೋಲಾಯಮಾನವಾಗಿದೆ. ಹೀಗಾಗಿ ಇಂದು ಅವರಿಗೆಲ್ಲಾ ಸಾಧ್ಯವಾದಷ್ಟು ನೆರವಾಗುವ ನಿಟ್ಟಿನಲ್ಲಿ ದಿನಸಿ ಕಿಟ್ ಗಳನ್ನ ವಿತರಿಸಲಾಗಿದೆ. ಈಗಾಗಲೇ ವಿವಿಧ ಸಮುದಾಯದವರು ಸೇರಿದಂತೆ ಪೌರಕಾರ್ಮಿಕರು, ಆಟೋಡ್ರೈವರ್ ಗಳು, ಬೀದಿ ಬದಿ ವ್ಯಾಪಾರಿಗಳು ಹೀಗೆ ಹಲವರಿಗೆ ದಿನಸಿ ಕಿಟ್ ಗಳನ್ನ ವಿತರಿಸುವ ಮೂಲಕ ಅವರ ಕಷ್ಟದಲ್ಲಿ ಸಾಧ್ಯವಾದಷ್ಟು ನೆರವಾಗುವ ಕಾರ್ಯ ಕೈಗೊಳ್ಳಲಾಗಿದೆ”, ಎಂದು ತಿಳಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರವು ಮಾದರಿ ಕ್ಷೇತ್ರವಾಗಿ ಬದಲಾಗಬೇಕೆಂಬ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನ ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು,”ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ವೇಳೆ, ಹಲವರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಮಕ್ಕಳಿಗಾಗಿಯೇ ಕೋವಿಡ್ ಕೇರ್ ಸೆಂಟರ್ ಸಿದ್ಧಪಡಿಸಲಾಗಿದೆ. ಹಾಗೆಯೇ ಕೋವಿಡ್ ನಿಮದ ಮೃತಪಟ್ಟವರ ಅಸ್ಥಿಗಳನ್ನ ಸಂಬಂಧಿಗಳು ಪಡೆದುಕೊಳ್ಳಲು ಹಿಂದೇಟು ಹಾಕಿದಾಗ ನಾನೇ ಖುದ್ದು ಆ ಎಲ್ಲಾ ಅಸ್ಥಿಗಳಿಗೆ ಕಾವೇರಿಯಲ್ಲಿ ಮುಕ್ತಿ ನೀಡುವ ಕಾರ್ಯ ಕೈಗೊಂಡೆ. ನನ್ನ ಉದ್ದೇಶ ಎಲ್ಲರಿಗೂ ಉತ್ತಮ ಜೀವನ ದೊರಕಬೇಕು. ನಾವು ಆದಷ್ಟು ಬೇಗ ಕೋವಿಡ್ ಗೆಲ್ಲಬೇಕು ಎಂಬುದಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನ ಪಾಲಿಸಬೇಕು. ಮತ್ತು ಡಿಸೆಂಬರ್ ಗೆ ಎಲ್ಲ ಅರ್ಹರು ಕೋವಿಡ್ ಲಸಿಕೆ ಪಡೆದುಕೊಳ್ಳುವಂತಾಗಬೇಕು”, ಎಂದು ತಿಳಿಸಿದರು.

ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ:
ಮೊದಲು ಕ್ಷೇತ್ರದ 182 ನೇ ವಾರ್ಡ್ ನಲ್ಲಿ ನೂತನ ವಾರ್ಡ್ ಕಚೇರಿ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿದ ಸಚಿವರು ನಂತರದಲ್ಲಿ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಲಸಿಕಾ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು,”ಕೋವಿಡ್ ವಿರುದ್ಧ ಹೋರಾಡಲು ನಮಗಿರುವ ಏಕೈಕ ಅಸ್ತ್ರ ಲಸಿಕೆಯೊಂದೆ. ಹೀಗಾಗಿ ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯುವ ಮೂಲಕ ಸ್ವರಕ್ಷಣೆ ಮತ್ತು ಸಮಾಜ ರಕ್ಷಣೆಗೆ ಮುಂದಾಗಬೇಕು”, ಎಂದು ತಿಳಿಸಿದರು.

ಆ ನಂತರದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಜನಾಂಗದವರ ಅನುಕೂಲಕ್ಕಾಗಿ ಪ್ಲಾಟ್ ಫಾರ್ಮ್ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಸಚಿವ ಅಶೋಕ ಅವರು ಬಿಜೆಪಿಯ ತತ್ವ ಸಿದ್ಧಾಂತ ಒಪ್ಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದ ನೂರಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರನ್ನ ಪಕ್ಷಕ್ಕೆ ಬರಮಾಡಿಕೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English