ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಬಲವರ್ಧನೆಗೆ ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,ಜೊತೆಗೆ ಅವು ಹೊಸ ದೃಷ್ಟಿಕೋನದಿಂದ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಮೂಲಕ ಸಂಸ್ಕೃತಿ ಕಟ್ಟುವ ಕೆಲಸಕ್ಕೆ ತೊಡಗಲು ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಅಧ್ಯಕ್ಷರು ಹಾಗೂ ರಂಗಾಯಣ ನಿರ್ದೇಶಕರು ಗಳೊಂದಿಗೆ ವಿಕಾಸ ಸೌಧದಲ್ಲಿ ಸಭೆ ನಡೆಸಿ ಮಾತನಾಡುತ್ತಿದ್ದರು.
ಪ್ರಾಧಿಕಾರ,ಅಕಾಡೆಮಿ ಮತ್ತು ರಂಗಾಯಣಗಳ ಹಾಗೂ ಸಂಸ್ಕೃತಿ ಇಲಾಖೆಯ ಮಧ್ಯೆ ಸುಗಮ ಸಮನ್ವಯ ಕಾರ್ಯ ನಿರ್ವಹಣೆ ಗಾಗಿ ರಾಜ್ಯದ ನಾಲ್ಕು ಉಪವಿಭಾಗ ಗಳಲ್ಲೀ ನಾಲ್ಕು ಜಂಟಿ ನಿರ್ದೇಶಕರ ನೇಮಕ ಮಾಡಲಾಗುವುದು ಇದರಿಂದ ಅಧಿಕಾರ ವಿಕೇಂದ್ರೀಕರಣ ವಾಗಿ ಆಡಳಿತ ಸುಧಾರಣೆಆಗುತ್ತದೆ,ಈ ಕುರಿತು ಆದೇಶ ಹೊರಡಿಸಲು ಈಗಾಗಲೇ ನಿರ್ದೇಶನ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ಸ್ವಾತಂತ್ರದ ಅಮೃತ ಮಹೋತ್ಸವ ಆಚರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಜೊತೆಗೂಡಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ ಅದನ್ನೊಂದು ಅಭಿಯಾನ ಮಾಡುವ ಚಿಂತನೆ ನಡೆದಿದೆ ಅದಕ್ಕೆಪೂರಕ ವಾಗುವಂತೆ ಎಲ್ಲಾ ಅಕಾಡೆಮಿ ಮತ್ತು ಪ್ರಾಧಿಕಾರಗಳು ಕಾರ್ಯಕ್ರಮ ರೂಪಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಮುಂದಿನ ನೂರು ದಿನಗಳಿಗೆ ಕಾರ್ಯಯೋಜನೆ ರೂಪಿಸಲು ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ , ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಸೇರಿದಂತೆ ಎಲ್ಲ ಪ್ರಾಧಿಕಾರ ಮತ್ತು ಅಕಾಡೆಮಿಗಳ ಅಧ್ಯಕ್ಷರು, ಇಲಾಖೆ ಕಾರ್ಯದರ್ಶಿ ರವಿಶಂಕರ್ ಮತ್ತು ನಿರ್ದೇಶಕ ಎಸ್ ರಂಗಪ್ಪ ಹಾಜರಿದ್ದರು .
Click this button or press Ctrl+G to toggle between Kannada and English