ಬೆಂಗಳೂರು : ಆಗಸ್ಟ್ 23 ರಿಂದ ಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗಳಿಗೆ ಹಾಜರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.
ಇಂದು ಮುಖ್ಯಮಂತ್ರಿಗಳು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.
ಶಾಲೆ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರ ಅನುಮತಿ, ಕೋವಿಡ್ ಸುರಕ್ಷತೆಯೊಂದಿಗೆ ಶಾಲೆಗಳಲ್ಲಿ ಕಲಿಕೆ, ಶಾಲೆಗಳನ್ನು ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪರ್ಯಾಯ ದಿನಗಳಲ್ಲಿ ಅಥವಾ ಶಿಫ್ಟ್ನಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಗಸ್ಟ್ 23 ರಂದು ಬೆಳಿಗ್ಗೆ ಶಿಕ್ಷಣ ಸಚಿವರೊಂದಿಗೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಾಲೆಗಳನ್ನು ಪ್ರಾರಂಭಿಸುವಲ್ಲಿ ಅತ್ಯಂತ ಕಾಳಜಿಯನ್ನು ವಹಿಸಲಾಗುವುದು. ಮಕ್ಕಳು ಶಾಲೆಗೆ ಬರಬೇಕು, ಕಲಿಕೆ ಆಗಬೇಕು. ಅದರ ಜೊತೆಗೆ ಕೋವಿಡ್ ಸುರಕ್ಷತೆಯೂ ಆಗಬೇಕು. ಪಾಲಕರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲೆಗೆ ಆಗಮಿಸುವ ಮಕ್ಕಳಿಗೆ ಧೈರ್ಯ ತುಂಬಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಶಾಲೆಗಳಲ್ಲಿ ಹಂತಹಂತವಾಗಿ ಮಕ್ಕಳ ಹಾಜರಾತಿ ಹೆಚ್ಚಬೇಕು ಎಂದರು.
Click this button or press Ctrl+G to toggle between Kannada and English