ಹೊಸದಿಲ್ಲಿ: ಅಫ್ಘಾನಿಸ್ತಾನದಲ್ಲಿ ಸುಮಾರು 150 ಭಾರತೀಯರು ಅಪಹರಣಕ್ಕೊಳಗಾಗಿ ಬಿಡುಗಡೆಯಾದ ಭಯಾನಕ ಘಟನೆಯ ಬಳಿಕ 168 ಮಂದಿ ಪ್ರಯಾಣಿಕರನ್ನು ಹೊತ್ತ ವಾಯುಪಡೆ ವಿಮಾನ ಭಾರತಕ್ಕೆ ತಲುಪಿದೆ. ಇದರಲ್ಲಿ 107 ಮಂದಿ ಭಾರತೀಯ ಪ್ರಜೆಗಳಿದ್ದರೆ, ಇನ್ನು ಇಬ್ಬರು ಅಫ್ಘನ್ ಸೆನೆಟರ್‌ಗಳು ಹಾಗೂ 24 ಸಿಖ್ಖರು ಸೇರಿದ್ದಾರೆ.
ಅಫ್ಘಾನಿಸ್ತಾನದ ಸನ್ನಿವೇಶದ ಕುರಿತು ಸಿಖ್ ಸಂಸದ ನರೇಂದರ್ ಸಿಂಗ್ ಖಾಲ್ಸಾ ಮಾತನಾಡುತ್ತಾ ‘ನನಗೆ ತೀವ್ರ ಅಳು ಬರುತ್ತಿದೆ. ಕಳೆದ 20 ವರ್ಷಗಳಲ್ಲಿ ಕಟ್ಟಿದ ಪ್ರತಿಯೊಂದೂ ಈಗ ನಾಶವಾಗಿದೆ. ಅಲ್ಲಿ ಈಗ ಶೂನ್ಯವಷ್ಟೇ ಇದೆ’ ಎಂದು ಗದ್ಗದಿತರಾದರು.
‘ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ಹೀಗಾಗಿ ನಾನು ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದೇನೆ. ನಮ್ಮ ಭಾರತೀಯ ಸಹೋದರರು ಹಾಗೂ ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ತಾಲಿಬಾನಿಗಳು ನನ್ನ ಮನೆಯನ್ನು ಸುಟ್ಟು ಕೆಡವಿದ್ದಾರೆ. ನಮಗೆ ಸಹಾಯ ಮಾಡಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಮತ್ತೊಬ್ಬ ಅಫ್ಘನ್ ಪ್ರಜೆ ಹೇಳಿದ್ದಾರೆ.
”ನಾವು ಪದೇ ಪದೇ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದೆವು. ತಾಲಿಬಾನಿಗಳು ಕ್ರೂರ, ಅನಾಗರಿಕ ವ್ಯಕ್ತಿಗಳು. ನಾವು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಯಿತು. ವಿಮಾನ ನಿಲ್ದಾಣದಲ್ಲಿ ಕೂಡ ತಾಲಿಬಾನಿಗಳು ಅಡ್ಡಗಟ್ಟಿದ್ದರು. ‘ಇಲ್ಲಿಂದ ಹೋಗಬೇಡಿ. ಎಲ್ಲಿಗೆ ಹೋಗುತ್ತೀರಿ?’ ಎಂದು ಗದರುತ್ತಿದ್ದರು. ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ಮೋದಿ ಸರ್ಕಾರಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ” ಎಂದು ಮತ್ತೊಬ್ಬ ಪ್ರಜೆ ತಿಳಿಸಿದ್ದಾರೆ.
ಕಾಬೂಲ್‌ನ ಗುರುದ್ವಾರದಲ್ಲಿ ರಕ್ಷಣೆ ಪಡೆದಿದ್ದ ಹೆಚ್ಚಿನ ಜನರನ್ನು ಕರೆತರಲಾಗಿದೆ. ಅವರನ್ನು ಬಾಂಗ್ಲಾ ಸಾಹಿಬ್ ಗುರುದ್ವಾರದಲ್ಲಿ ಇರಿಸಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಪ್ರಜೆಗಳನ್ನು ಕರೆತರಲು ಪ್ರತಿ ದಿನ ಕಾಬೂಲ್‌ಗೆ ಎರಡು ವಿಮಾನಗಳು ತೆರಳಲು ಭಾರತಕ್ಕೆ ಅನುಮತಿ ನೀಡಲಾಗಿದೆ.
Click this button or press Ctrl+G to toggle between Kannada and English