ಗಡಿಭಾಗಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ: ಸಚಿವ ಡಾ.ಕೆ.ಸುಧಾಕರ್

10:54 PM, Tuesday, August 31st, 2021
Share
1 Star2 Stars3 Stars4 Stars5 Stars
(No Ratings Yet)
Loading...

Sudhakarಚಿಕ್ಕಬಳ್ಳಾಪುರ :  ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ ಜಿಲ್ಲೆಗಳಲ್ಲಿ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಪ್ರತಿ ದಿನ ಗಡಿ ಜಿಲ್ಲೆಗಳಿಗೆ ಬರುವ ಜನರಿಗೆ ಯಾವ ರೀತಿ ನಿಯಮ ಪಾಲಿಸಬೇಕೆಂದು ಚರ್ಚಿಸಲಾಗುವುದು ಎಂದರು.

ಕೇರಳದಿಂದ ಪ್ರತಿ ದಿನ ಅನೇಕರು ಗಡಿ ಜಿಲ್ಲೆಗಳಿಗೆ ಬರುತ್ತಾರೆ. ಶಿಕ್ಷಣ, ಆರೋಗ್ಯ ಸೇವೆ, ನಿತ್ಯದ ವಹಿವಾಟುಗಳಿಗೆ ದಕ್ಷಿಣ ಕನ್ನಡ, ಉಡುಪಿ ಮೊದಲಾದ ಜಿಲ್ಲೆಗಳಿಗೆ ಜನರು ಬರುತ್ತಾರೆ. ಇನ್ನು ವಿಮಾನ, ರೈಲುಗಳ ಮೂಲಕ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕಿದೆ. ಇದಕ್ಕಾಗಿ ಕೋವಿಡ್ ಮಾರ್ಗಸೂಚಿ ರೂಪಿಸಲಾಗುವುದು ಎಂದರು.

ಕೆಜಿಎಫ್ ನ ಶಿಕ್ಷಣ ಸಂಸ್ಥೆಯಲ್ಲಿ 32 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕೇರಳದಿಂದ ಬಂದವರಾಗಿದ್ದಾರೆ. ನಾಳೆ ಸಂಸ್ಥೆಗೆ ಹೋಗಿ ಸಂಸ್ಥೆಯ ಮೇಲೂ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಕೇರಳದಿಂದ ಬಂದಾಗಲೇ ಅವರ ನೆಗೆಟಿವ್ ವರದಿ ಪಡೆಯಬೇಕಿತ್ತು. ಇದು ಸಂಸ್ಥೆಯ ಜವಾಬ್ದಾರಿಯೂ ಆಗಿದೆ. ರಾಜ್ಯದಲ್ಲಿ 50 ಸಾವಿರ ಪ್ರಕರಗಳನ್ನು 700-800 ಕ್ಕೆ ತರಲಾಗಿದೆ. ಸರ್ಕಾರ ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದೆ ಎಂದರು.

ಮಕ್ಕಳಿಗೆ ಶೈಕ್ಷಣಿಕ ಭವಿಷ್ಯ ಹಾಗೂ ಸಂರಕ್ಷಣೆ ಸರ್ಕಾರದ ಜವಾಬ್ದಾರಿ. ಎಲ್ಲಾ ಶಾಲೆಗಳಲ್ಲಿ ವಿಶೇಷ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಕಂಡುಬಂದರೆ ಶಾಲೆ ಮುಚ್ಚಿ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ, ಸಮಾರಂಭಗಳನ್ನು ಮಾಡಬೇಕೆನ್ನುವುದು ಎಲ್ಲರಿಗೂ ಇದೆ. ಆದರೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಎಲ್ಲರೂ ಪಾಲಿಸಲೇಬೇಕು. ಕೋವಿಡ್ ತಡೆಗೆ ತಾಂತ್ರಿಕ ಸಲಹಾ ಸಮಿತಿಯ ಸಲಹೆ, ಆರೋಗ್ಯ ಇಲಾಖೆಯ ಸಲಹೆಗಳನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಕೊರೊನಾ ನಿಯಂತ್ರಿಸುವ ಒಂದೇ ದೃಷ್ಟಿಯಿಂದ ನಾವು ನೋಡುತ್ತಿದ್ದೇವೆ. ಮುಖ್ಯಮಂತ್ರಿಗಳು ಎಲ್ಲಾ ದೃಷ್ಟಿಕೋನದಿಂದ ನೋಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಪ್ರತ್ಯೇಕ ಹಾಲು ಒಕ್ಕೂಟ

ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡುವ ಪ್ರಸ್ತಾಪಕ್ಕೆ ಜೀವ ಬಂದಿದೆ. ಮುಖ್ಯಮಂತ್ರಿಗಳು ಇದಕ್ಕೆ ಮನಸ್ಸು ಮಾಡಿದ್ದಾರೆ. ಇದು ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಿದೆ. ಜಿಲ್ಲೆಯ ಜನತೆಗೆ ಇದು ಆಗಬೇಕು ಎಂಬ ಮನಸ್ಸಿದೆ. ಇದರ ವಿರುದ್ಧ ಯಾರು ಬೇಕಾದರೂ ನಿಯೋಗ ಹೋಗಲಿ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English