ಬೆಂಗಳೂರು : ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ , ಈ ಮೂವರು ಅಮಾನತಿ ಗೊಳಗಾದ ಸಿಬ್ಬಂದಿ ಯಾಗಿದ್ದಾರೆ.
ಇವರು ಪ್ರತಿ ಮಾಹೆ ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ ಕೆಲವು ಬಿಲ್ಲುಗಳನ್ನು ಮಾರ್ಪಾಟು ಮಾಡಿ ಅದರ ಮೊತ್ತವನ್ನು ಕಡಿಮೆ ಮಾಡಿ ಆ ಮೂಲಕ ಬೆಸ್ಕಾಂಗೆ ಬರಬೇಕಾದ ವಾಸ್ತವಿಕ ಆದಾಯದಲ್ಲಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಇವರ ಮೇಲೆ ಕೋಲಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ತಾವು ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಅಕ್ರಮ ಎಸಗಿ ಆ ಮೂಲಕ ಇಲಾಖೆಗೆ ನಷ್ಟವುಂಟು ಮಾಡುವ ಯಾವುದೇ ಅಧಿಕಾರಿ, ಸಿಬ್ಬಂದಿ ಇರಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ಈ ಮೂವರು ಸಿಬ್ಬಂದಿ ಗಳು ಬೇರೆ, ಬೇರೆ ಐ ಪಿ ವಿಳಾಸಗಳ ಗಣಕಯಂತ್ರಗಳಲ್ಲಿ ಐ ಡಿ ಗಳನ್ನು ಉಪಯೋಗಿಸಿ ವಂಚನೆ ಎಸಗಿರುವುದು ದೃಢ ವಾಗಿರುವುದರಿಂದ ಹಾಗೂ 8 ಆರ್ ಆರ್ ಸಂಖ್ಯೆಗಳಲ್ಲಿ ಒಟ್ಟು 444966-00 ಗಳಷ್ಟು ಮೊತ್ತ ಕಂಪನಿಗೆ ನಷ್ಟವಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ, ಜೊತೆಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಯನ್ನು ಸಹ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Click this button or press Ctrl+G to toggle between Kannada and English