ಪಾಸಿಟಿವಿಟಿ ಸೂಚ್ಯಂಕ ಕಡಿಮೆಯಾಗುವವರೆಗೆ ಹೆಚ್ಚಿನ ತಪಾಸಣೆಗೆ ನಿರ್ದೇಶನ

11:22 PM, Saturday, September 4th, 2021
Share
1 Star2 Stars3 Stars4 Stars5 Stars
(No Ratings Yet)
Loading...

Rajendra Kumarಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಕಡಿಮೆಯಾಗುವವರೆಗೂ ಹೆಚ್ಚಿನ ತಪಾಸಣೆಗಳನ್ನು ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ನಿರ್ದೇಶನ ನೀಡಿದರು.

ಅವರು ಸೆಪ್ಟೆಂಬರ್ 4ರ ಶನಿವಾರ ಕೋವಿಡ್-19 ಸೋಂಕಿನ ನಿಯಂತ್ರಣ ಕುರಿತು ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿ ಸೂಚನೆ ನೀಡಿದರು.

ಜಿಲ್ಲೆಯ ಗಡಿ ಭಾಗಗಳು, ನಗರ ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್ ತಪಾಸಣೆ ಮಾಡಬೇಕು, ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆಗಳನ್ನು ನೀಡಬೇಕು, ಇದರಿಂದ ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಕೊರೊನಾ ಸೂಚ್ಯಂಕವನ್ನು ಇಳಿಕೆ ಮಾಡುವಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ವಾರಾಂತ್ಯ ಮತ್ತು ರಾತ್ರಿ ಕಫ್ರ್ಯೂಗಳು ಜಾರಿಯಲ್ಲಿದ್ದು, ಸರ್ಕಾರದ ಮುಂದಿನ ಆದೇಶದವರೆಗೂ ಸಾರ್ವಜನಿಕರು ಕಡ್ಡಾಯವಾಗಿ ಈ ನಿರ್ದೇಶನಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಅವರು ತಿಳಿಸಿದರು.

ಆಯಾ ದಿನಗಳಂದು ಹಂಚಿಕೆಯಾಗುವ ಲಸಿಕೆಗಳನ್ನು ಅದೇ ದಿನವೇ ನೀಡಬೇಕು, ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕಂದಾಯ, ರೈಲ್ವೇ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳು ಹೆಚ್ಚಿನ ಗಮನಹರಿಸಿ ಸಹಕರಿಸಬೇಕು. ಜಿಲ್ಲಾಡಳಿತ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಚಾಚುತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆಯೂ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 2,240 ಕೋವಿಡ್ ಸಕ್ರೀಯ ಪ್ರಕರಣಗಳಿದ್ದೂ, ಶೇ.70 ರಷ್ಟು ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ ಹಾಗೂ ಶೇ. 30 ರಷ್ಟು ಆಸ್ಪತೆ ಸೇರಿದಂತೆ ವಿವಿಧ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ, ಜಿಲ್ಲೆಯ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಇತರ ಅಧಿಕಾರಿಗಳು ಕೋವಿಡ್ ನಿಯಂತ್ರಣ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಉಪವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕಿಶೋರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ವಿಸಿಯಲ್ಲಿ ಭಾಗವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English