ತುರ್ತು ಬೆಳೆ ಪರಿಹಾರಕ್ಕೆ 38.65 ಕೋಟಿ ರೂಗಳಿಗೆ ಅನುಮೋದನೆ: ಕಂದಾಯ ಸಚಿವ ಆರ್ ಅಶೋಕ

2:01 PM, Sunday, September 5th, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka Agriculture ಬೆಂಗಳೂರು  : ಕಂದಾಯ‌ ಸಚಿವ ಆರ್ ಅಶೋಕ್ ವಿಪತ್ತು ಪರಿಹಾರ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಾತನಾಡಿದ ಸಚಿವರು “ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಅದರಿಂದುಂಟಾದ ಪ್ರವಾಹದಿಂದ ರಾಜ್ಯದ 15 ಜಿಲ್ಲೆಗಳ 86 ತಾಲ್ಲುಕುಗಳನ್ನು ಪ್ರವಾಹ ಪೀಡಿತ ಎಂದು‌ ಘೋಷಿಸಲಾಗಿತ್ತು. ಹಲವಾರು ರೈತರ ಬೆಳೆಹಾನಿ, ಕೃಷಿ ಭೂಮಿ ಹಾನಿ, ಪ್ರಾಣಿಗಳ ಸಾವು, ಸಾರ್ವಜನಿಕ ರಸ್ತೆ, ಕಟ್ಟಡಗಳು, ನೀರಾವರಿ ವ್ಯವಸ್ಥೆ ಗಳಿಗೆ ಹಾನಿಯುಂಟಾಗಿತ್ತು. ಕಂದಾಯ ಇಲಾಖೆಯು ಒಟ್ಟು ಹಾನಿಯನ್ನು ಸುಮಾರು 5690 ಕೋಟಿ ರೂ ಎಂದು ಅಂದಾಜಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಎನ್ ಡಿ ಆರ್ ಎಫ್ ಗೈಡ್ ಲೈನ್ಸ್ ಪ್ರಕಾರ ಸುಮಾರು 765.84 ಕೋಟಿ ರೂ ಎಂದು ಅಂದಾಜಿಸಿದೆ.

ಇಂದು ಕೇಂದ್ರ ಎನ್ ಡಿ ಆರ್ ಎಫ್ 3 ತಂಡಗಳು ರಾಜ್ಯಕ್ಕೆ ಬರಲಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಸುಶೀಲ್ ಪಾಲ್ ನೇತೃತ್ವದ ತಂಡ – ಬೆಳಗಾವಿ ಜಿಲ್ಲೆ, ಗುರುಪ್ರಸಾದ ನೇತೃತ್ವದ ತಂಡ – ಧಾರವಾಡ, ಬಾಗಲಕೋಟೆ ಜಿಲ್ಲೆ,  ವಿಜಯಕುಮಾರ ನೇತೃತ್ವದ ತಂಡ – ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ ಯಲ್ಲಿ ಪರಿಶೀಲನೆ ನಡೆಸಲಿದೆ.

4-09-2021 ರಿಂದ 7-09-2021ರವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಿ ಹಾನಿಯ ಸರ್ವೇ ಕಾರ್ಯ ನಡೆಸಲಿದೆ. ಕೇಂದ್ರದಿಂದ ಇನ್ನೂ ಹೆಚ್ಚಿನ ‌ನೆರವು ಪಡೆಯಲು ಎಲ್ಲ ಪ್ರಯತ್ನ ನಡೆಸಲಾಗಿದೆ” ಎಂದು ಹೇಳಿದರು.

ಪರಿಹಾರ ನೀಡುವದರ ಕುರಿತು ಮಾತನಾಡಿದ ಆರ್ ಅಶೋಕ್ “ಪ್ರಸ್ತುತ ಕಂದಾಯ ಇಲಾಖೆ ರಾಜ್ಯದ 13 ಜಿಲ್ಲೆಗಳ 45,586 ಫಲಾನುಭವಿಗಳನ್ನು ಬೆಳೆ ಪರಿಹಾರ ನೀಡಲು ಗುರುತಿಸಿ, ಸುಮಾರು 38.65 ಕೋಟಿ ರೂಗಳನ್ನು ಪರಿಹಾರ ನೀಡಲು ಇಂದು ಅನುಮೋದನೆ ನೀಡಿದ್ದೇನೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುವುದು.ರಾಜ್ಯ ಸರ್ಕಾರ ರೈತರ ಎಲ್ಲ ಕಷ್ಟಗಳಿಗೆ ಶೀಘ್ರ ಸ್ಪಂದಿಸುತ್ತದೆ. ನಾಡಿನ ಜೀವನಾಡಿಗಳಾದ ರೈತರ ಜೊತೆ ಸದಾ ಸರ್ಕಾರ ನಿಂತಿದೆ” ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English