ಪ್ರಸಕ್ತ ವರ್ಷ 5 ಸಾವಿರ ಶಿಕ್ಷಕರ ನೇಮಕ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

7:20 PM, Sunday, September 5th, 2021
Share
1 Star2 Stars3 Stars4 Stars5 Stars
(No Ratings Yet)
Loading...

CM-teachers-day ಬೆಂಗಳೂರು:  ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 5 ಸಾವಿರ ಶಿಕ್ಷಕರ ನೇಮಕ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಿಸಿದರು.

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಸಮಾರಂಭದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 5 ಸಾವಿರ ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿದರು.

21ನೇ ಶತಮಾನ ಜ್ಞಾನದ ಶತಮಾನ. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನದತ್ತ ಮುನ್ನಡೆದಿರುವ ದೇಶ, ಇದೀಗ ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನದತ್ತ ವೇಗವಾಗಿ ಸಾಗಿದೆ. ಈ ವೇಗಕ್ಕೆ ಶಿಕ್ಷಕರು ಹೊಂದಿಕೊಳ್ಳುವುದು ಅನಿವಾರ್ಯ. ಉತ್ತಮ ವಿದ್ಯಾರ್ಥಿಗಳಾದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರಶ್ನಿಸುವ ಮನೋಭಾರ ಬೆಳೆಸಲು ಪ್ರೇರೇಪಿಸಿ, ತಿಳಿದುಕೊಳ್ಳಲು ಉತ್ತೇಜನ ನೀಡುವವರೇ ನಿಜವಾದ ಗುರುಗಳು. ಮಕ್ಕಳಲ್ಲಿ ಮುಗ್ಧತೆ, ತಿಳಿದುಕೊಳ್ಳುವ ತವಕವನ್ನು ಉಳಿಸುವವರು ಅತ್ಯುತ್ತಮ ಗುರುಗಳು ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳನ್ನು ಪರೀಕ್ಷಿಸುವಾಗ ಅದು ನಿಮ್ಮ ಪರೀಕ್ಷೆಯೂ ಹೌದು ಎಂದು ನುಡಿದರು.

CM-teachers-dayನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಶಿಕ್ಷಕರು ತಮ್ಮ ಅನಿಸಿಕೆ, ಅನುಮಾನ ವ್ಯಕ್ತಪಡಿಸಿ, ಮುಕ್ತವಾಗಿ ಚರ್ಚಿಸಿ ಮುಂದುವರೆಯೋಣ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಸಾತ್ವಿಕತೆ, ವೈಚಾರಿಕತೆಯನ್ನು ಹೊಂದಿದ ಅಪರೂಪದ ನಾಯಕರಾಗಿದ್ದರು. ನೈತಿಕ ನಡೆಯ ಧೀಮಂತ ನಾಯಕರಾದ ರಾಧಾಕೃಷ್ಣನ್ ಅವರ ಆದರ್ಶದ ಜೀವನ ನಮಗೆ ದಾರಿದೀಪ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಬುದ್ಧಿ, ಕರುಣೆ, ಕೌಶಲ್ಯ ತರಬೇತಿಯನ್ನು ಮೈಗೂಡಿಸಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ, ಭಾರತಕ್ಕೆ ಸ್ವಾಭಿಮಾನಿ, ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಶ್ರಮಿಸಿದ ಹಾಗೂ ಯಶಸ್ವಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿಕೊಟ್ಟ ಶಿಕ್ಷಕರನ್ನು ಶ್ಲಾಘಿಸಿದ ಸಚಿವರು, ಕೋವಿಡ್ ನಿಂದ ಪ್ರಾಣ ಕೊಟ್ಟ ಶಿಕ್ಷಕರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಶಾಲೆಗಳ ಅಭಿವೃದ್ಧಿಗೆ ದೇಣಿಗೆ ವರ್ಗಾವಣೆಗಾಗಿ ರೂಪಿಸಲಾದ ‘ನಮ್ಮ ಶಾಲೆ ನನ್ನ ಕೊಡುಗೆ’ ತಂತ್ರಾಂಶವನ್ನು ಉದ್ಘಾಟಿಸಿದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English