ಮಂಗಳೂರು : ಕೋವಿಡ್-19 ಸೋಂಕು ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ ಸಂಬಂಧಿಸಿದ ಆಯಾ ತಾಲೂಕುಗಳ ಆರೋಗ್ಯಾಧಿಕಾರಿಗಳು ಹೆಚ್ಚಿನ ತಪಾಸಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಈ ನಿರ್ದೇಶನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ತಿಳಿಸಿದರು.
ಸೆ. 6ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ನಿರ್ಬಂಧಗಳ ಕುರಿತು ಚರ್ಚಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನಾ ಸೋಂಕು ನಿಯಂತ್ರಿಸುವಿಕೆಯಲ್ಲಿ ಹೆಚ್ಚಿನ ತಪಾಸಣೆ ಅತಿ ಅಗತ್ಯ. ಈ ದಿಸೆಯಲ್ಲಿ ಜಿಲ್ಲಾ ಹಾಗೂ ತಾಲೂಕುಗಳ ಆರೋಗ್ಯ ಅಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು ಕೋವಿಡ್ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ತಪಾಸಣೆಯನ್ನು ತುರ್ತಾಗಿ ನಡೆಸಬೇಕು, ಇಲ್ಲಿ ನಿರ್ಲಕ್ಷ್ಯ ಮಾಡಬಾರದು, ಮಾಡಿದ್ದಲ್ಲಿ ಸಂಬಂಧಿಸಿ ತಾಲೂಕುಗಳ ಆರೋಗ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅವರು ನೀಡಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಮಾತನಾಡಿ, ಸಚಿವರ ಸೂಚನೆಯಂತೆ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ತಪಾಸಣೆ ಮಾಡಬೇಕು, ಅದನ್ನು ಶೇ.100 ರಷ್ಟು ಕಾರ್ಯಗತಗೊಳ್ಳಬೇಕು, ಇದನ್ನು ತಹಶಿಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು ಮೇಲುಸ್ತುವಾರಿ ಮಾಡಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿರುವ ಕೋವಿಡ್ ಪಾಸಿಟಿವಿಟಿ ಸೂಚ್ಯಂಕದ ಬಗ್ಗೆ ಸಂಬಂಧಿಸಿದ ಆರೋಗ್ಯಾಧಿಕಾರಿಗಳು ಪಟ್ಟಿ ಒದಗಿಸುವಂತೆ ಅವರು ಸೂಚಿಸಿದರು.
8ರ ಬುಧವಾರ ಲಕ್ಷ ಲಸಿಕಾ ಮೇಳ:
ಜಿಲ್ಲೆಯಲ್ಲಿ ಇದೇ ಸೆ. 8ರ ಬುಧವಾರ ಕೋವಿಡ್ ಲಸಿಕೆಯ ಲಕ್ಷ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. 430 ಉಪಕೇಂದ್ರಗಳಲ್ಲಿ ಅದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಇರುವ ಸಿಬ್ಬಂದಿಗಳೊಂದಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಇಬ್ಬರು ಡೇಟಾ ಟಂಟ್ರಿ ಆಪರೇಟರ್ ಸೇರಿದಂತೆ ಅಗತ್ಯವಿರುವ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ನೇಮಿಸಲಾಗಿದೆ. 18 ವರ್ಷ ಮೇಲ್ಪಟ್ಟವರು ಮೊದಲ ಅಥವಾ ಎರಡನೇ ಡೋಸ್ ಲಸಿಕೆಯನ್ನು ಈ ಲಸಿಕಾ ಮೇಳದಲ್ಲಿ ಪಡೆಯಬಹುದಾಗಿದೆ. ಉದ್ಯೋಗಸ್ಥರ ಅನುಕೂಲಕ್ಕಾಗಿ ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಲಸಿಕೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ನಾಗರೀಕರು ಇದರ ಸದುಪಯೋಗ ಪಡೆಯುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಜಿಲ್ಲೆಯಲ್ಲಿ ಪಾಸಿಟಿವಿಟಿ ಸೂಚ್ಯಂಕ ಕಡಿಮೆ ಮಾಡಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಂತೆ ಈ ಬಾರಿಯೂ ಪರಿಸರ ಸ್ನೇಹಿ ಗಣೇಶ ಚತುರ್ಥಿಯನ್ನು ಜಿಲ್ಲೆಯ ಜನತೆ ಆಚರಿಸುವಂತೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಜಿಲ್ಲೆಯ ಜನತೆಗೆ ಕರೆ ನೀಡಿದರು.
ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ವೇದಿಕೆಯಲ್ಲಿದ್ದರು.
ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English