ಬಂಟ್ವಾಳ : ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಲ್ಲಿರುವ ವರೆಗೆ ಕೊರೋನ ಮೂರನೇ ಅಲೆಯ ಜೊತೆಗೆ ಇನ್ನೆಷ್ಟು ಅಲೆಗಳು ಬಂದರೂ ಅದನ್ನು ಎದುರಿಸುವ ಶಕ್ತಿ ಭಾರತಕ್ಕೆ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಅರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ನಿಂದ ಜಗತ್ತಿನ ಸೂಪರ್ ಪವರ್ ದೇಶಗಳು ತತ್ತರಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭಾರದಲ್ಲಿ ಕೊರೋನವನ್ನು ವ್ಯವಸ್ಥಿತವಾಗಿ ಎದುರಿಸಿ ಇಡೀ ಜಗತ್ತು ಭಾರತದ ಕಡೆ ನೋಡುಂತೆ ಮಾಡಿದೆ. ಕೊರೋನ ಎದುರಿಸಲು ಭಾರತ ಕೈಗೊಂಡ ಮೋದಿಯವರ ಕಾರ್ಯಕ್ಕೆ ವಿಶ್ವದಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದರು.
ಭಾರತದಲ್ಲಿ 130 ಕೋಟಿ ಜನಸಂಖ್ಯೆ ಇದೆ. ದೇಶದ ಪ್ರತೀ ಚದರ ಕಿ.ಮೀ.ನಲ್ಲಿ 450 ಜನ ಸಂಖ್ಯೆ ವಾಸವಿದೆ. ಮಹಾರಾಷ್ಟ್ರದ ಧಾರಾವಿ ಸ್ಲಂನಲ್ಲಿ ಪ್ರತೀ ಚದರ ಕಿ.ಮೀ.ನಲ್ಲಿ ಸಾವಿರಾರು ಮಂದಿ ಬದುಕುತ್ತಾರೆ. ಆದರೆ ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದರ ಅರ್ಧದಷ್ಟು ಜನ ಸಂಖ್ಯೆ ಇಲ್ಲ. ಆದರೂ ಆ ರಾಷ್ಟ್ರಗಳು ಕೊರೋನದಿಂದ ನಲುಗಿದೆ. ಭಾರತ ಯಶಸ್ವಿಯಾಗಿ ಕೊರೋನವನ್ನು ಗೆದ್ದಿದೆ. ಇದು ನರೇಂದ್ರ ಮೋದಿ ಆಡಳಿತಕ್ಕೆ ಇರುವ ಶಕ್ತಿ ಎಂದು ಅವರು ಹೇಳಿದರು.
ಆರಂಭದಲ್ಲಿ ಕೊರೋನವನ್ನು ಎದುರಿಸಲು ಚಪ್ಪಾಳೆ ತಟ್ಟುವಂತೆ, ದೀಪ ಉರಿಸುವಂತೆ ಪ್ರಧಾನಿ ಕರೆ ನೀಡಿದಾಗ ಇಡೀ ದೇಶದ ಜನತೆ ಅದಕ್ಕೆ ಸ್ಪಂದನೆ ನೀಡಿತು. ಆದರೆ ವಿರೋಧ ಪಕ್ಷಗಳು ಅದನ್ನು ತಮಾಷೆ, ಟೀಕೆ ಮಾಡಿತು. ಬಳಿಕ ಅದರ ಅರಿವು ವಿರೋಧ ಪಕ್ಷಕ್ಕೂ ಆಯಿತು. ಮೋದಿ ಅವರು ದೂರ ದೃಷ್ಟಿಯಿಂದ ದೇಶವನ್ನು ಆಳುತ್ತಿರುವ ಓರ್ವ ಶ್ರೇಷ್ಠ ಆಡಳಿತಗಾರ ಎಂದು ಅವರು ಹೇಳಿದರು.
ಕೊರೋನ ಆರಂಭದ ಬಳಿಕ ದೇಶದಲ್ಲಿ ಪ್ರತಿ ದಿನ 10 ಲಕ್ಷ ಪಿಪಿ ಕಿಟ್ ಗಳು ತಯಾರಾಗುತ್ತಿದೆ. ಅಲ್ಲದೆ ಹೊರ ದೇಶಗಳಿಗೆ ಭಾರತ ಸಾಕಷ್ಟು ಪಿಪಿ ಕಿಟ್ ಗಳನ್ನು ರಫ್ತು ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪ್ರತೀ ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಇರುವಷ್ಟು ವೆಂಟಿಲೇಟರ್ ಗಳನ್ನು ಸರಬರಾಜು ಮಾಡಿದೆ. ಬಂಟ್ವಾಳ ತಾಲೂಕು ಆಸ್ಪತ್ರೆಗೆ 8 ವೆಂಟಿಲೇಟರ್ ಗಳು ಬಂದಿವೆ. ತಾಲೂಕಿನಲ್ಲಿ ಮೂರು ಆಕ್ಸಿಜನ್ ಘಟಕ ನಿರ್ಮಾಣ ಆಗಿವೆ. ಇದು ಬಿಜೆಪಿ ಸರಕಾರದ ಸಾಧನೆಯಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ದೇಶದ ಜೊತೆಗೆನೇ ಭಾರತ ಕೊರೋನ ವಿರುದ್ಧ ಹೋರಾಟಕ್ಕೆ ಎರಡು ಪರಿಣಾಮಕಾರಿ ಲಸಿಕೆಯನ್ನು ಜಗತ್ತಿಗೆ ಪರಿಚಯಿಸಿದೆ. ಈಗಾಗಲೇ ದೇಶದ 65 ಕೋಟಿ ಜನರಿಗೆ ಉಚಿತ ಲಸಿಕೆ ನೀಡಲಾಗಿದೆ. ಮೋದಿ ಲಸಿಕೆ, ನಕಲಿ ಲಸಿಕೆ ಎಂದು ತಮಾಷೆ ಮಾಡಿ ಲಸಿಕೆಯನ್ನು ವಿರೋಧಿಸಿದವರು ಕೂಡಾ ಎರಡನೇ ಅಲೆಯ ಬಳಿಕ ಲಸಿಕೆ ಪಡೆದು ಸುರಕ್ಷಿತರಾಗಿದ್ದಾರೆ ಎಂದು ಅವರು ನುಡಿದರು.
ಕೊರೋನ ಬಳಿಕ ನೆರೆ ದೇಶಗಳಲ್ಲಿ ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಅಲ್ಲಿ ಒಂದು ಕೆ.ಜಿ. ಅಕ್ಕಿಯ ಬೆಲೆ 250 ರೂ. ತಲುಪಿದೆ. ಈ ಕಷ್ಟದ ಸಮಯದಲ್ಲೂ ನಮ್ಮ ದೇಶದ ಜಿಡಿಪಿ ಏರುತ್ತಿದೆ. ಜಗತ್ತು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದೆ. ಅಭಿವೃದ್ಧಿಗೆ ತಕ್ಕಂತೆ ಬೆಲೆ ಏರಿಕೆ ಸಹಜವಾಗಿದೆ. ಟೀಕೆ ಮಾಡಲು ಬೇರೆ ಯಾವುದೇ ವಿಷಯ ಇಲ್ಲದ ವಿರುದ್ಧ ಪಕ್ಷಗಳು ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿದೆ ಎಂದು ಅವರು ತಿಳಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು ನಮ್ಮ ನಾಯಕರ ಸಲಹೆ, ಸೂಚನೆಯಂತೆ ಜನ ಸಾಮಾನ್ಯರ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಕಿಟ್ ಗಳು ನಮ್ಮ ಕಾರ್ಯಕರ್ತರು ಅರ್ಹರಿಗೆ ವ್ಯವಸ್ಥಿತವಾಗಿ ತಲುಪಿಸುತ್ತಿದ್ದಾರೆ. ಅದರ ಜೊತೆಗೆ ಪಕ್ಷದ ವತಿಯಿಂದಲೂ ಅರ್ಹರಿಗೆ ಆಹಾರ ಕಿಟ್ ಗಳು, ಔಷಧಿ ಸಾಮಗ್ರಿಗಳು, ಆಂಬ್ಯುಲೆಂನ್ಸ್ ಸೇವೆ ನೀಡುತ್ತಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳು ವಿರೋಧ, ಪ್ರತಿಭಟನೆ, ಟೀಕೆ ಮಾಡುವುದರಲ್ಲಿ ಅರ್ಥ ಇಲ್ಲ. ಬಂಟ್ವಾಳ ಕ್ಷೇತ್ರದಲ್ಲಿ ಎಂಟು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಪಕ್ಷದವರೂ ಬಂದು ಸೇರಲಿ. ಇಂಥಹ ಸಮಯದಲ್ಲಿ ರಾಜಕೀಯ ಬಿಡುವ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುವ ಎಂದು ಅವರು ಕರೆ ನೀಡಿದರು.
ರಾಜ್ಯದಲ್ಲಿ ಪ್ರಥಮವಾಗಿ ಐಸಿಯು ಬಸ್ ಬಂಟ್ವಾಳ ಕ್ಷೇತ್ರದಲ್ಲಿ ಸಂಚರಿಸುತ್ತಿದೆ. ಇದರಿಂದ ಕ್ಷೇತ್ರದ ಜನರಿಗೆ ಆರೋಗ್ಯ ಸೇವೆ ದೊರೆಯುತ್ತಿದೆ. ಇಂಥಹ ಆರೋಗ್ಯ ಸೇವೆ ಇಡೀ ದೇಶದಲ್ಲಿ ನಡೆಯಬೇಕು ಎಂದು ಪ್ರಧಾನಿಗೆ ಕೆ.ಎಂ.ಸಿ. ಆಸ್ಪತ್ರೆಯ ಹೃದಯ ತಜ್ಞರೊಬ್ಬರು ಟ್ವಿಟ್ ಮಾಡಿದ್ದಾರೆ. ಆದರೂ ಕಾಂಗ್ರೆಸ್ ನವರು ಇದನ್ನು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದ 38 ಗ್ರಾಮಕ್ಕೆ ಬಸ್ ತಲುಪಿದೆ. 25 ಗ್ರಾಮದಲ್ಲಿ ಮಾತ್ರ ಬಿಜೆಪಿ ಬೆಂಬಲಿತ ಆಡಳಿತ ಇದೆ. ಆದರೂ ಕಾಂಗ್ರೆಸ್ ನವರು ಬಸ್ ಬಗ್ಗೆ ಸುಳ್ಳು ಟೀಕೆ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಟೀಕೆ ಸಹಜ. ಯಾವುದೇ ಟೀಕೆಗೆ ಬಿಜೆಪಿ ಕಾರ್ಯಕರ್ತರು ಮಾತಿನಲ್ಲಿ ಉತ್ತರ ನೀಡದೆ ಜನ ಸಾಮಾನ್ಯರ ಸೇವೆ ಮಾಡುವ ಮೂಲಕ ಉತ್ತರ ನೀಡಬೇಕು ಎಂದು ಹೇಳಿದರು.
ಬಂಟ್ವಾಳ ಕ್ಷೇತ್ರದಲ್ಲಿ 45 ವರ್ಷ ಮೀರಿದ 92 ಶೇ., 60 ವರ್ಷ ಮೀರಿದ 100 ಶೇ., 18 ವರ್ಷ ಮೀರಿದ 45 ಶೇ. ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಕಾರ್ಯಕರ್ತರು ಪ್ರತೀ ಬೂತಿನಲ್ಲಿ ಇರುವ ಪ್ರತೀ ಮನೆಯವರ ಅರೋಗ್ಯದ ಮೇಲೆ ನಿಗಾ ಇಡಬೇಕು. ಆರೋಗ್ಯದ ಬಗ್ಗೆ ಅಗತ್ಯ ಇರುವ ಸೇವೆಯನ್ನು ಜನರಿಗೆ ಸಕಾಲದಲ್ಲಿ ದೊರೆಯುವಂತೆ ಮಾಡಬೇಕು. ಜನರ ಸೇವೆಯಿಂದ ಪಕ್ಷವೂ ಬೆಳೆಯುತ್ತದೆ ಎಂದು ಅವರು ಸಲಹೆ ನೀಡಿದರು.
ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಆರೋಗ್ಯ ಸ್ವಯಂಸೇವಕರ ಅಭಿಯಾನದ ಜಿಲ್ಲಾ ಸಂಚಾಲಕ ಈಶ್ವರ್ ಕಟೀಲು ಉಪಸ್ಥಿತರಿದ್ದರು.
ಡಾ. ಸುಕೇಶ್ ಕೊಟ್ಟಾರಿ ಆರೋಗ್ಯ ಮಾಹಿತಿ ನೀಡಿದರು. ಆರೋಗ್ಯ ಸ್ವಯಂಸೇವಕರ ಅಭಿಯಾನದ ತಾಲೂಕು ಸಂಚಾಲಕ ಪ್ರಕಾಶ್ ಅಂಚನ್ ಸ್ವಾಗತಿಸಿದರು. ಹರ್ಷಿಣಿಪುಷ್ಪಾನಂದ ಧನ್ಯವಾದ ನೀಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English