ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಕಾಸರಗೋಡು ಆಯ್ಕೆ

3:16 PM, Wednesday, September 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

Achuta Chevar ಕಾಸರಗೋಡು : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟಿಸಿದ್ದು, ತೃತೀಯ ಪುರಸ್ಕಾರಕ್ಕೆ ಕೇರಳ ರಾಜ್ಯದ ಕಾಸರಗೋಡು ಅಲ್ಲಿನ ಹಿರಿಯ ಕನ್ನಡಿಗ ಪತ್ರಕರ್ತ ಅಚ್ಯುತ ಎಂ.ಚೇವಾರ್ ಇವರನ್ನು ಆಯ್ಕೆ ಮಾಡಿದೆ ಎಂದು ಪತ್ರಕರ್ತರ ಸಂಘವು ತಿಳಿಸಿದೆ.

2021 ನೇ ಸಾಲಿನ ಕಪಸಮ ತೃತೀಯ ಪ್ರಶಸ್ತಿ ಹಿರಿಯ ಕನ್ನಡಿಗ ಪತ್ರಕರ್ತರಿಗೆ ಕೊಡಮಾಡಲಾಗುತ್ತಿದೆ. ಇತ್ತೀಚೆಗೆ ನಡೆಸಲ್ಪಟ್ಟ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಮತ್ತು ತೀರ್ಪುಗಾರರ ಸಮಿತಿಯ ಸಹ ಸದಸ್ಯರಾದ ಸಾ.ದಯಾ ಮತ್ತು ಹರೀಶ್ ಹೆಜ್ಮಾಡಿ ನಿರ್ಣಾಯದಂತೆ ಪತ್ರಕರ್ತ ಅಚ್ಯುತ ಚೇವಾರ್ ಇವರನ್ನು ಮಾಧ್ಯಮಶ್ರೀ-೨೦೨೧ ಪ್ರಶಸ್ತಿಗೆ ಆಯ್ಕೆ ನಡೆಸಲಾಗಿದೆ. ದಿ| ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸುಪುತ್ರ ಶ್ರೀ ವಿಕಾಸ್ ವೇಣುಗೋಪಾಲ್ ಪರಿವಾರದ ಸಹಕಾರ ಮತ್ತು ಕಪಸಮ ಸಂಘದ ಪ್ರಶಸ್ತಿನಿಧಿಯೊಂದಿಗೆ ವಾರ್ಷಿಕವಾಗಿ ಕೊಡಮಾಡುವ ಈ ಪ್ರಶಸ್ತಿಯು ರೂಪಾಯಿ 25.000/-(ಇಪ್ಪತ್ತೈದು ಸಾವಿರ) ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ ಹೊಂದಿರುತ್ತದೆ.

ಪ್ರಥಮ ಪ್ರಶಸ್ತಿ (2019 ) ಮುಂಬಯಿಯ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ ಇವರಿಗೆ ದ್ವಿತೀಯ ಪ್ರಶಸ್ತಿಯನ್ನು (2020) ಮುಂಬಯಿಯಲ್ಲಿನ ಹಿರಿಯ ಪತ್ರಕರ್ತ ಶ್ರೀ ಜಿ.ಕೆ ರಮೇಶ್ ಇವರಿಗೆ ಪ್ರದಾನಿಸಿ ಗೌರವಿಸಲಾಗಿದೆ. ಇದೇ ಸೆ.೧೯ನೇ ಭಾನುವಾರ ಬೆಳಿಗ್ಗೆ ಲೋಟಸ್ ಸಭಾಗೃಹ, ಸಾಲೀಟರಿ ಕಾರ್ಪೋರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಈ ಪುರಸ್ಕಾರ ಪ್ರದಾನಿಸಲಾಗುವುದು ಎಂದು ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಮತ್ತು ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕೆ.ಟಿ ವೇಣುಗೋಪಾಲ್:
ಸಮಾಜಮುಖಿ ದೃಷ್ಠಿಕೋನವುಳ್ಳವರಾಗಿ, ಪತ್ರಿಕೋದ್ಯಮವನ್ನು ಪ್ರತಿಷ್ಠಿತವಾಗಿರಿಸಿ ಓರ್ವ ಹಿರಿಯ ಪತ್ರಕರ್ತನಾಗಿ ಮುಂಬಯಿ ಕನ್ನಡ ಪತ್ರಿಕೋದ್ಯಮ ರಂಗಕ್ಕೆ ಸುಮಾರು ಮೂರುವರೆ ದಶಕಗಳ ದೀರ್ಘಾವಧಿಯ ಅನುಪಮ, ಅತ್ಯಮೂಲ್ಯ ಸೇವೆಗೈದಿರುವರು. ಸ್ವಂತಿಕೆಯ ಪ್ರತಿಷ್ಠೆಯೊಂದಿಗೆ ಅಗ್ರಗಣ್ಯ ಪತ್ರಕರ್ತರೆನಿಸಿದ ಸ್ವರ್ಗೀಯ ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸೇವೆ ಅನನ್ಯವೂ ಸ್ಮರಣೀಯವೂ ಆಗಿದೆ. ಕಥೆಗಾರನೂ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಹಿರಿಯ ಸದಸ್ಯರಾಗಿದ್ದು ಸಂಘದ ಸಂವಿಧಾನ ರಚನಾ ಸಮಿತಿ ಕಾರ್ಯಾಧ್ಯಕ್ಷ ಆಗಿದ್ದ ಶ್ರೀಯುತರು ತಮ್ಮ ನಿವೃತ್ತ ಜೀವನದ ಬಳಿಕ ಪುಣೆಯಲ್ಲಿ ನೆಲೆಯಾಗಿದ್ದು ೨೦೦೯ರಲ್ಲಿ ನಿಧನರಾಗಿದ್ದರೂ ಈಗಲೂ ಪತ್ರಿಕೋದ್ಯಮ, ಜನಮಾನಸದಲ್ಲಿ ನೆಲೆಯಾಗಿರುವ ಶ್ರೇಷ್ಠ ಪತ್ರಕರ್ತರೆಣಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಬದ್ದತೆಯಿಂದ ವೃತ್ತಿಗೆ ಘನತೆಯನ್ನು ತಂದೊದಗಿಸಿದ ಕೆಟಿವಿ ನಿಷ್ಠೆಯನ್ನು ಭವಿಷ್ಯತ್ತಿನ ಪತ್ರಕರ್ತ ಸಮುದಾಯಕ್ಕೆ ಮಾದರಿ ಆಗಿಸುವ ನಿಟ್ಟಿನಲ್ಲಿ ಕೆ.ಟಿ ವೇಣುಗೋಪಾಲ್ ಸ್ಮರಣಾರ್ಥ ಕನ್ನಡಿಗ ಪತ್ರಕರ್ತರ ಸಂಘವು ವರ್ಷಂಪ್ರತಿ ಈ ಪ್ರಶಸ್ತಿ ಪ್ರದಾನಿಸುತ್ತಿದೆ.

ಶ್ರೀ ಅಚ್ಯುತ ಚೇವಾರ್
ಗಡಿನಾಡು ಕಾಸರಗೋಡು ಪೈವಳಿಕೆ ಇಲ್ಲಿನ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಅವರ ಕೊಡುಗೆ ಗಮನಾರ್ಹ. ಪತ್ರಿಕೋದ್ಯಮವನ್ನು ಒಂದು ಹವ್ಯಾಸವನ್ನಾಗಿಸಿಕೊಂಡ ಅವರು ವೃತ್ತಿ ಜೀವನದ ಮಧ್ಯಯೂ ಕೆಲವು ವರ್ಷ ಸ್ವತಂತ್ರ ಪತ್ರಕರ್ತನಾಗಿ ಕನ್ನಡ ಮಾತ್ರವಲ್ಲದೆ ಮಲಯಾಳ ಪತ್ರಿಕೆಗಳಿಗೂ ವರದಿ ಕಳುಹಿಸುತ್ತಿದ್ದರು. 1077ರಲ್ಲಿ ಅವರಿಗೆ ಉದಯವಾಣಿ ಬಳಗದ ಸಂಪರ್ಕವಾಯಿತು. ಅಂದಿನಿಂದ ಇಂದಿನ ವರೆಗೂ ಆ ಪತ್ರಿಕೆಯ ನಂಟನ್ನು ಉಳಿಸಿಕೊಂಡಿದ್ದಾರೆ.

ಪ್ರಾದೇಶಿಕ ವರದಿಗಾರನಾಗಿ ಉದಯವಾಣಿಗೆ ಸಕಾಲಿಕ ವರದಿಗಳನ್ನು ನೀಡುತ್ತಾ ಓರ್ವ ಜನಪ್ರಿಯ ಪತ್ರಕರ್ತನಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಪತ್ರಿಕಾರಂಗದಲ್ಲಿ ನಾಲ್ಕೂವರೆ ದಶಕಗಳ ಇತಿಹಾಸವಿದೆ. ಬಹುಮುಖ ಪ್ರತಿಭಾಸಂಪನ್ನ ಅಚ್ಯುತ ಇವರು ಮಹಾಲಿಂಗ ಆಚಾರ್ಯ ಮತ್ತು ಲಕ್ಷ್ಮೀ ಮಹಾಲಿಂಗ ದಂಪತಿ ಪುತ್ರನಾಗಿ ಜನಿಸಿದ್ದ ಇವರು ಎಸ್‌ಎಸ್‌ಎಲ್‌ಸಿ ಉತ್ತೀರ್ಣದ ಬಳಿಕ ಜೀವನೋಪಾಯಕ್ಕಾಗಿ ಟೈಲರ್ ವೃತ್ತಿಯನ್ನು ಅವಲಂಬಿಸಿದ್ದರು. ವಸ್ತ್ರದಂಗಡಿ ವ್ಯಾಪಾರ ಆರಂಭಿಸಿ ಯಶಸ್ಸನ್ನು ಕಂಡರು. ಜತೆಗೆ ಜೀವ ವಿಮಾ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದರು. ಆಗಲೇ ಅವರ ಬರಹಗಳು ಪತ್ರಿಕೆಗಳಲ್ಲಿ ಬೆಳಕು ಕಾಣುತ್ತಿದ್ದುವು. ದೇಶ, ಧರ್ಮ, ಸಂಸ್ಕೃತಿಯ ಬಗ್ಗೆ ಅವರಿಗೆ ಅಪಾರ ಅಭಿಮಾನ. ೧೯೭೫ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆದಾಗ ಅದರ ವಿರುದ್ಧ ಸತ್ಯಾಗ್ರಹ ನಡೆಸಿದ್ದಾರೆ. ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಆರು ತಿಂಗಳು ಸೆರೆಮನೆವಾಸ ಅನುಭವಿಸಿದ್ದರು.

ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾಗಿ ಸುಮಾರು ಎರಡೂವರೆ ದಶಕಗಳ ಕಾಲ ಜನಪ್ರತಿನಿಯಾಗಿ ಜನಪ್ರಿಯರಾದರು. ಅವರು ಅಧ್ಯಕ್ಷರಾಗಿದ್ದಾಗ ಪೈವಳಿಕೆ ಪಂಚಾಯತ್ ಕೇರಳದ ವಿಶೇಷ ಪುರಸ್ಕಾರಕ್ಕೆ ಭಾಜನವಾಗಿತ್ತು. ಎರಡು ಲಕ್ಷ ರೂ.ಗಳ ಪುರಸ್ಕಾರ ಧನ ಪಂಚಾಯತ್‌ಗೆ ಲಭಿಸಿತ್ತು. ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಬಂದಿರುವ ಅಚ್ಯುತ ಚೇವಾರ್ ಸಮಸ್ತರ ಸ್ನೇಹಾದರಗಳಿಗೆ ಪಾತ್ರರಾಗಿದ್ದಾರೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಲೇ ಬಂದಿದ್ದಾರೆ.

ಮಂಗಳೂರು ಆಕಾಶವಾಣಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಿರುವ ಅವರು ವಿವಿಧ ಸಾಂಸ್ಕೃತಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿ ಕೊಂಡವರು. ಕಾಸರಗೋಡುನ ಕನ್ನಡ ಚಟುವಟಿಕೆಗಳ ಲ್ಲೂ ಸಕ್ರಿಯರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಸರಗೋಡು ಇಲ್ಲಿನ ವಿವಿಧ ಸಂಘಟನೆಗಳು ಅಭಿನಂದನೆ, ಸನ್ಮಾನ ನೀಡಿವೆ. ಅವರು ಬರೆದ ನುಡಿಚಿತ್ರ, ಲೇಖನಗಳ ಸಂಖ್ಯೆ ಅಪಾರ.

ಸರಳತೆ, ಸಜ್ಜನಿಕೆಯ ಪ್ರತಿರೂಪವಾಗಿರುವ ಅವರ ಮುದ್ದಾದ ಹಸ್ತಾಕ್ಷರ ಹೃದಯದಷ್ಟೇ ಶುದ್ಧ, ನಿರ್ಮಲ. ಅಚ್ಯುತ ಅವರ ಪತ್ನಿ ಯಶವಂತಿ ಚೇವಾರ್. ಉದಯವಾಣಿಯ ಮೇಲಿನ ಪ್ರೀತಿ ಮತ್ತು ಅಭಿಮಾನದ ಪ್ರತೀತವಾಗಿ ಪುತ್ರನಿಗೆ ಉದಯ, ಪುತ್ರಿಗೆ ವಾಣಿ ಎಂದು ಹೆಸರಿಟ್ಟಿದ್ದಾರೆ. ಸಂತೃಪ್ತ ಕುಟುಂಬ ಅವರದು. ೨೦೨೧ರ ಫೆಬ್ರವರಿಯಲ್ಲಿ ಕಾಸರಗೋಡುನಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘವು ಅಚ್ಯುತ ಚೇವಾರ್ ಅವರಿಗೆ ಸನ್ಮಾನಿಸಿ ಗೌರವಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English