ಕಲ್ಬುರ್ಗಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾತುಕತೆ : ಸಚಿವ ಅಶೋಕ

10:10 PM, Saturday, September 11th, 2021
Share
1 Star2 Stars3 Stars4 Stars5 Stars
(No Ratings Yet)
Loading...

R ashoka ಬೆಂಗಳೂರು  : ಇತ್ತೀಚಿಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಆಡಳಿತ ಹಿಡಿಯುವುದಕ್ಕಾಗಿ ಮೂರು ಪಕ್ಷಗಳು ಮೈತ್ರಿ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಇಂದು ಕಂದಾಯ ಸಚಿವ ಆರ್ ಅಶೋಕ ಬಿಡದಿಯ ಫಾರ್ಮ್ ಹೌಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

ಜೆಡಿ ಎಸ್ ಮಾಜಿ ಸಚಿವ ಸಾ ರಾ ಮಹೇಶ್ ಅವರ ಆಹ್ವಾನದ ಮೇರೆಗೆ ಕುಮಾರಸ್ವಾಮಿಯವರನ್ನ ಭೇಟಿ ಮಾಡಿ ದೊಡ್ಡಬಳ್ಳಾಪುರ ಹಾಗೂ ಕಲ್ಬುರ್ಗಿ ಪಾಲಿಕೆಗಳಲ್ಲಿ ಮೈತ್ರಿ ಆಡಳಿತ ನಡೆಸುವ ಕುರಿತಂತೆ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು.

ಈ ಕುರಿತು ಮಾಹಿತಿ ನೀಡಿದ ಸಚಿವ ಅಶೋಕ,”ದೊಡ್ಡಬಳ್ಳಾಪುರದಲ್ಲಿ ಜೆಡಿ ಎಸ್ ಜೊತೆಗೆ ಮೈತ್ರಿ ಬಹುತೇಕ ಖಚಿತವಾಗಿದೆ. ಈ ಕುರಿತು ಕುಮಾರಸ್ವಾಮಿಯವರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಕಲ್ಬುರ್ಗಿ ಪಾಲಿಕೆ ಮೈತ್ರಿ ವಿಚಾರಕ್ಕೆ ಸೋಮವಾರ ಸಂಜೆಯ ವೇಳೆಗೆ ದೇವೇಗೌಡರ ಜೊತೆಗಿನ ಸಭೆಯ ಸಂತರ ವಿಷಯ ತಿಳಿಸುವ ಮಾತನ್ನಾಡಿದ್ದಾರೆ,” ಎಂದು ಹೇಳಿದರು.

“ಕಾಂಗ್ರೆಸ್ ಜೊತೆಗಿನ ಮೈತ್ರಿ ಕುರಿತು ಖರ್ಗೆಯವರು ಮಾತನಾಡಿರಬಹುದು. ಆದರೆ ಸಿದ್ದರಾಮಯ್ಯ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಅವರು ಜೆಡಿಎಸ್ ಜೊತೆಗಿನ ಹೊಂದಾಣಿಕೆಯ ಕುರಿತಂತೆ ಪ್ರಸ್ತಾಪವನ್ನೇ ಮಾಡಿಲ್ಲ. ಆದರೆ ನಮ್ಮಲ್ಲಿ ಪಕ್ಷದ ವರಿಷ್ಠರಿಂದ ಜೆಡಿಎಸ್ ಜೊತೆಗೆ ಮೈತ್ರಿ ಮಾತುಕತೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಕುಮಾರಸ್ವಾಮಿಯವರೊಂದಿಗೆ ಮಾತನಾಡಿದ್ದೇನೆ. ಸಂದರ್ಭ ಬಂದರೆ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೂ ಮಾತುಕತೆ ನಡೆಸಲಾಗುವುದು. ದೊಡ್ಡಬಳ್ಳಾಪುರ ಹಾಗೂ ಕಲ್ಬುರ್ಗಿ ಎರಡೂ ಕಡೆಗೆ ಮೈತ್ರಿ ಫಲಪ್ರದವಾಗುವ ಸಂಪೂರ್ಣ ವಿಶ್ವಾಸವಿದೆ”, ಎಂದು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English