ಮಂಜೇಶ್ವರ : ಹೊಸಂಗಡಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ವಾರದ ಭಜನೆಯ ಮಂಗಳವಾಗುತ್ತಿದ್ದಂತೆಯೇ ಮೋಹನ್ ದಾಸ್ ಕೊಡ್ಡೆ (55) ಅವರು ಶನಿವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮಂಜೇಶ್ವರದ ಬಲ್ಲಂಗುಡೇಲು ನಿವಾಸಿಯಾಗಿರುವ ಅವರು ಅಲ್ಲೇ ಭಜನಾ ತಂಡವನ್ನು ರಚಿಸಿ ಹಲವಾರು ವಿದ್ಯಾರ್ಥಿಗಳನ್ನು ಸೇರಿಸಿ ತರಗತಿ ನಡೆಸುತ್ತಿದ್ದರು. ಮಂಜೇಶ್ವರ ಗಣೇಶೋತ್ಸವದಲ್ಲಿ ರಾತ್ರಿ ಹಗಲೆನ್ನದೆ ಅಹರ್ನಿಶಿ ಶ್ರಮಿಸಿದ್ದ ಅವರು ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ಗುರುತಿಸಿಕೊಂಡಿದ್ದರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯರಾಗಿದ್ದು, ಭಜನಾ ಸಂಕೀರ್ತನಾಕಾರರಾಗಿ, ಭಜನಾ ಸಂಘಟಕರಾಗಿ ಕನಿಲ ಶ್ರೀ ಭಗವತೀ ಕ್ಷೇತ್ರದ ಭಜನಾ ಮಂಡಳಿಯ ಪ್ರಮುಖರು, ಪಟ್ಟತ್ತಮೊಗರು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಭಜನಾ ಮಂಡಳಿಯ ಗುರುಗಳಾಗಿ ಹಲವಾರು ಮಂದಿಗಳಿಗೆ ಭಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ ಮಹಾನ್ ವ್ಯಕ್ತಿಯಾಗಿದ್ದರು.
ಇವರಿಂದ ಪ್ರೇರಿತರಾದ ಹಲವಾರು ಮಂದಿ ಇದೀಗ ಭಜನಾ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡು, ಭಜಕರಾಗಿ ಪ್ರಸಿದ್ಧಿಯನ್ನು ಪಡೆದಿರುವರು. ಕನಿಲ ಶ್ರೀ ಭಗವತೀ ಕ್ಷೇತ್ರದ ಶ್ರೀ ಭಗವತೀ ಸೇವಾ ಸಂಘ ವಾಮಂಜೂರು ಇದರ ಸದಸ್ಯರಾಗಿದ್ದು, ಚಕ್ರವರ್ತಿ (ರಿ.) ಹೊಸಂಗಡಿ ಸಂಸ್ಥೆಯ ಮಾಜಿ ಸದಸ್ಯರಾಗಿದ್ದು, ಸಂಸ್ಥೆಯ ವಿವಿಧ ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವರು. ಪ್ರಸ್ತುತ ಕೊಡ್ಡೆ ಕರ್ಕೇರ ತರವಾಡಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವರು. ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲದೇ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಮಾಲಾಧಾರಿಗಳಾಗಿ ಶಬರಿಮಲೆ ಕ್ಷೇತ್ರ ದರ್ಶನಗೈದಿದ್ದರು. ಮತ್ತು ಸಾರ್ವಜನಿಕ ಶ್ರೀ ಮಂಜೇಶ್ವರ ಗಣೇಶೋತ್ಸವದಲ್ಲಿ ಕೂಡಾ ಪಧಾಧಿಕಾರಿಗಳಾಗಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದರು.
ಈ ಬಾರಿಯ 41 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ 4 ದಿನಗಳ ಪರ್ಯಂತ ನಡೆಯುತ್ತಿರುವ ವಿವಿಧ ಭಜನಾ ಸಂಘಟನೆಗಳ ಭಜನಾ ಸಂಕೀರ್ತನೆ ಕಾರ್ಯಕ್ರಮದ ರೂವಾರಿಯಾಗಿದ್ದರು. ಮೊನ್ನೆಯಿಂದ ನಿನ್ನೆ ರಾತ್ರಿಯ ತನಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ, ವೈದಿಕ ವಿಭಾಗದಲ್ಲಿ ಎಲ್ಲಾ ಕೆಲಸ – ಕಾರ್ಯಗಳನ್ನು ಸಂಯಮದಿಂದ ನಿಷ್ಠೆಯಿಂದ ಮಾಡಿದ್ದರು.
ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಶಿಕ್ಷಣ ಕೇಂದ್ರದ ಭಜನಾ ತಂಡದ ಮಕ್ಕಳಿಗೆ ಭಜನಾ ತರಗತಿಗಳನ್ನು ನಡೆಸಿಕೊಡುತ್ತಿದ್ದರು. ಶ್ರೀ ಗುರು ಕುಣಿತ ಭಜನಾ ತಂಡ ದಲ್ಲಿ ಹಲವಾರು ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಮೃತರು ಮಂಗಳೂರಿನಲ್ಲಿ ವಾಚ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ಕನಿಲ ಶ್ರೀ ಭಗವತೀ ಕ್ಷೇತ್ರದ ಆನಂದ ಗುರಿಕಾರರ – ರೇವತಿ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಅನುಷಾ, ದೀಕ್ಷಾ, ಸಹೋದರ – ಸಹೋದರಿಯರಾದ ಚಂದ್ರಹಾಸ ಬಿ.ಎಂ, ಯಶವಂತಿ, ಧನಂಜಯ, ರೋಹಿದಾಸ್ ಮಸ್ಕತ್, ಅರವಿಂದ ಹಾಗೂ ಅಪಾರ ಬಂಧು – ಮಿತ್ರರನ್ನ ಅಗಲಿದ್ದಾರೆ.
Click this button or press Ctrl+G to toggle between Kannada and English