ಪುತ್ತೂರು : ಪುತ್ತೂರಿನ ಜೋಸ್ ಆಲುಕ್ಕಾಸ್ ಮಳಿಗೆಗೆ ಸೆ.1ರಂದು ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸೋಮವಾರ ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ ನಿವಾಸಿಗಳಾದ ಬೀಬಿಜಾನ್, ಹುಸೇನ್ ಬಿ, ಜೈತುಂಬಿ ಬಂಧಿತ ಆರೋಪಿಗಳು.
ಚಿನ್ನಾಭರಣ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಇವರು ಸೆ.1ರಂದು ಜೋಸ್ ಆಲುಕ್ಕಾಸ್‌ಗೆ ಬಂದು ಚಿನ್ನವನ್ನು ಖರೀದಿಸಿದ್ದರು. ಇದೇ ಸಂದರ್ಭದಲ್ಲಿ 2,60,400 ರೂ. ಮೌಲ್ಯದ ಕಿವಿಯ ಚಿನ್ನಾಭರಣವನ್ನು ವಂಚಿಸಿ ಕಳವು ಮಾಡಿಕೊಂಡು ಹೋಗಿದ್ದರು. ಅಲ್ಲದೆ ಖರೀದಿ ಬಿಲ್ಲಿನಲ್ಲಿ ಸುಳ್ಳು ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನೀಡಿದ್ದರೆನ್ನಲಾಗಿದೆ.
ಈ ಕುರಿತು ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಮ್ಯಾನೇಜರ್ ರತೀಶ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪುತ್ತೂರಿನ ಬೀರಮಲೆ ಗುಡ್ಡೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಸೋಮವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English