2020-21ರ ಸಾಲಿನ ಶ್ರೀ ಶಿವಯೋಗಿ ಪುಟ್ಟರಾಜ ಪ್ರಶಸ್ತಿ ಪ್ರಕಟ

3:58 PM, Thursday, September 16th, 2021
Share
1 Star2 Stars3 Stars4 Stars5 Stars
(No Ratings Yet)
Loading...

Shivayogi Awardಹುಬ್ಬಳ್ಳಿ : ಪೂಜ್ಯಶ್ರೀ ಶಿವಯೋಗಿ ಡಾ.ಪಂ.ಪುಟ್ಟರಾಜ ಕವಿಗವಾಯಿಗಳವರ 11ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಗಾನಯೋಗಿ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ ವತಿಯಿಂದ ಶ್ರೀ ಶಿವಯೋಗಿ ಪುಟ್ಟರಾಜ ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ 2020-21ರ ಸಾಲಿನ ಪ್ರಶಸ್ತಿಗೆ ಭಾಜನರಾದ ಮಹನಿಯರ ಪರಿಚಯ.

ಪಂ.ಫಕ್ಕಿರೇಶ ಕಣವಿ: ಶ್ರೀ ವಿರೇಶ್ವರ ಪುಣ್ಯಾಶ್ರಮದ ಗಾನ ಬಾಗಿಲದೋಳ್ ತಲೆಬಾಗಿ ನೀ ಬಂದು ಗುರುಪುಟ್ಟರಾಜರ ಶಿಷ್ಯರಾಗಿ ಗುರು-ಬಂಧುಗಳಿಗೆ ಹಿರಿಯರಾಗಿ, ನೋಡುಗರ ಕಣ್ಣಿಗೆ ಸರಳ ಸಜ್ಜನಿಕೆಯ ಮಣಿಯಾಗಿ ಅಂತರಂಗದಲ್ಲಿ ರಾಗರಜ್ಜನಿಕೆಯ ಮಾಲಿಕೆಯನ್ನೇ ಅಡಗಿಸಿ ಸ್ವರಸಾಮ್ರಾಜ್ಯದ ವೈಭವಕ್ಕೆ ಮಾಲೀಕರಾದವರು ಪಂ.ಫಕ್ಕಿರೇಶ ಕಣವಿಯವರು.

ಗದಗ ತಾಲ್ಲೂಕಿನ ಭಕ್ತಿಯ ಬೀಡಾದ ಕಣವಿ ಗ್ರಾಮದಲ್ಲಿ ಸತ್ಸಂಪನ್ನ, ಸದ್ಗೃಹಸ್ಥ ಶರಣ ದಂಪತಿಗಳಾದ ತಂದೆ ಮುದಕಪ್ಪ, ತಾಯಿ ಗಂಗಮ್ಮರ ಪುಣ್ಯ ಗರ್ಭದಲ್ಲಿ 1955 ರಲ್ಲಿ ಜನಿಸಿದರು. ಹಿಂದುಸ್ತಾನಿ ಸಂಗೀತದಲ್ಲಿ ಬಿ. ಹೈಗ್ರೇಡ್ ಸಾಧಿಸಿ, ಕಲಬುರಗಿ ಆಕಾಶವಾಣಿ ನಿಲಯದ ಕಲಾವಿದರಾಗಿ ಬಹುತೇಕ ಬಾನುಲಿಗಳ ಸ್ವರ ಬಾನಾಡಿಯಾಗಿ ಸಂಗೀತಲೋಕದ ಭಾನೆತ್ತರಕ್ಕೆ ಹಾರಿದವರಿವರು. ಭುವನ ವೈಭವದ ಸಂಗೀತವನ್ನು ಸಾವಿರಾರು ಕಂಠಗಳಿಗೆ ವರವಾಗಿ ನೀಡಿದ ಮಹಾನ್ ಕೀರ್ತಿ ಕಣವಿಯವರದು. ಸ್ವರಪ್ರಸಾದದಲ್ಲಿ ಜನರನ್ನು ಮಂತ್ರಮುಗ್ಧರನ್ನಾಗಿಸಿ ತಾನವಿತಾನದ ಸ್ವರಮಾಂತ್ರಿಕರಾದವರು. ಸದಾ ಆಲಾಪಗಳ ಆಹ್ಲಾದವನ್ನೇ ಉಂಟುಮಾಡಬಲ್ಲ ಇವರು ಪುಟ್ಟರಾಜರ ಗುರುವಿನ ಸೇವೆಯನ್ನು ಮನದುಂಬಿ ಮಾಡಿದ ಸೇವಾರತ್ನವೇ ಇವರಾಗಿದ್ದಾರೆ. ರಮಣ ಮಹರ್ಷಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಅನವರತವೂ ಸ್ವರಧ್ಯಾನವನ್ನೇ ತಪ್ಪಸ್ಸನ್ನಾಗಿಸಿಕೊಂಡಿರುವ ಶ್ರೀಯುತರಿಗೆ ಲಿಂಗೈಕ್ಯ ಶ್ರೀ ರಾಜಶೇಖರಯ್ಯನವರು ಹಾಗೂ ಲಿಂಗೈಕ್ಯ ಮಾತೋಶ್ರೀ ನೀಲಾಂಬಿಕಾ ನವಲಿಹಿರೇಮಠ ಸಾ.ಕೊಪ್ಪಳ ಇವರ ಸ್ಮರಣಾರ್ಥ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಹಾಗೂ ನಗದು, ಸನ್ಮಾನ ಪತ್ರ ನೀಡಿ ಗೌರವಿಸಲು ಸಂತೋಷವೆನಿಸುತ್ತದೆ.

ಶ್ರೀ ವೇದವಿದ್ವಾನ್ ಎಂ. ಎಸ್. ಶಶಿಧರ ಶಾಸ್ತ್ರಿಗಳು: ನಾದವಿದ್ಯೆಯಷ್ಟೇ ವೇದವಿದ್ಯೆಯೂ ಸಹ ಸನಾತನ ಧರ್ಮಕ್ಕೆ ಸದಾ ಶಾಂತಿ ನೀಡುತ್ತಲೇ ಬಂದಿದೆ. ಆದಿಕಾಲದಿಂದಲೂ ಬಂದಿರುವ ವೇದವೈವಿಧ್ಯತೆಯೂ ಮಾನವನನ್ನು ಮಹದೇವನ್ನಾಗಿಸಬಲ್ಲ ಚಿತ್ಶಕ್ತಿಯನ್ನು ವೇದವಿದ್ವಾನ್ ಶ್ರೀ ಎಂ.ಎಸ್. ಶಶಿಧರಶಾಸ್ತ್ರಿಗಳು ಹೊಂದಿದ್ದಾರೆ. ಶ್ರೀಯುತರು ಸಿದ್ಧಗಂಗೆಯ ಪವಿತ್ರ ತಾಣ ತುಮಕೂರ ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಲಗೊಂಡನಹಳ್ಳಿ ಹಿರೇಮಠದ ಭಕ್ತಿಸುಸಂಪನ್ನರಾದ ಶ್ರೀ ಸಿದ್ಧಯ್ಯಸ್ವಾಮಿ ಹಾಗೂ ತಾಯಿ ಲಿಂಗಮ್ಮನವರ ಪವಿತ್ರ ಉದರದಲ್ಲಿ 1953ರಲ್ಲಿ ಜನಿಸಿದರು. ಮೈಸೂರಿನ ಜಯಚಾಮರಾಜೇಂದ್ರ ಒಡೆಯರ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿ ವಿದ್ವಾನ್ ಪದವಿಯನ್ನು ಪೂರೈಸಿ ಶಾಸ್ತ್ರೋಕ್ತಯುಕ್ತ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾ ಜನಕಲ್ಯಾಣದತ್ತ ಚಿತ್ತಹರಿಸಿದವರು.

ಗೌರಿಬಿದನೂರಿನ ನಂಜುಂಡಾರಾಧ್ಯರ ನಿಕಟ ಒಡನಾಡಿಗಳಾದ ಈ ಮಹನೀಯರಿಗೆ ಅನೇಕ ಪದವಿ, ಪ್ರಶಸ್ತಿಗಳು ಸತ್ಕಾರ-ಸನ್ಮಾನಗಳು ಒದಗಿಬಂದದ್ದು ಶ್ರೀಯುತರ ಸೇವಾಕೈಂಕರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಕಳೆದ ನಲವತ್ತು ವರ್ಷಗಳಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಸಾಂಗತ್ಯ ಪ್ರಭು ವೈದಿಕ ಪಾಠಶಾಲೆಯಲ್ಲಿ ಸಹಸ್ರ ವಟುಗಳಿಗೆ ವೇದಸುವಿದ್ಯೆ ಬೋಧಿಸಿ ಅವರನ್ನೆಲ್ಲ ಸಾಧಕರನ್ನಾಗಿಸುತ್ತಾ ಬರುತ್ತಿದ್ದು ಇಂದಿಗೂ ಇವರ ವೈದಿಕ ಸೇವೆ ನಿರಂತರವಾಗಿ ಸಾಗಿದೆ.

ಇವರಿಗೆ ಗದುಗಿನ ಹಿರಿಯ ವೈದಿಕ ಜ್ಯೋತಿಷ್ಯವಾಘ್ಮೀ ಲಿಂಗೈಕ್ಯ ವೇ.ಮೂ ಶ್ರೀ ಚನ್ನವೀರಶಾಸ್ತ್ರಿಗಳು ಹಿಡ್ಕಿಮಠ ಅವರು ವೈದಿಕೆ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅಲ್ಲದೆ, ಪಂ.ಪಂಚಾಕ್ಷರ ಗವಾಯಿಗಳಿಗೆ ಎತ್ತಾಗಿ ತೊತ್ತಾಗಿ ಹತ್ತಿರವೇ ಇದ್ದು ಗವಾಯಿಗಳಿಗೆ ಊರುಗೋಲಾಗಿ ವೀರೇಶ್ವರ ಪುಣ್ಯಶ್ರಮಕ್ಕೆ ಬೆಳಕಾಗಿದ್ದಾರೆ. ಇಂತಹ ಹೆಸರನ್ನು ಚಿರಸ್ತಾಯಿಯಾಗಿಸಲು ಅವರ ಸ್ಮರಣಾರ್ಥ ಶ್ರೀ ವೇದವಿದ್ವಾನ್ ಎಂ. ಎಸ್. ಶಶಿಧರ ಶಾಸ್ತ್ರಿಗಳವರಿಗೆ ನಗದು, ಸನ್ಮಾನ ಪತ್ರದೊಂದಿಗೆ ಶ್ರೀ ಶಿವಯೋಗಿ ಪುಟ್ಟರಾಜ ಪ್ರಶಸ್ತಿ ನೀಡಿ ಸತ್ಕರಿಸಲಾಗುತ್ತಿದೆ.

ಬಿ.ಮಂಜಮ್ಮ ಜೋಗತಿ : ಕರುನಾಡಿನ ಜೇನುಸವಿಯಂತಹ ಜನಪದಲೋಕದ ಅನಘ್ರ್ಯರತ್ನ ಬಿ.ಮಂಜಮ್ಮ ಜೋಗತಿಯವರನ್ನು ಜನಪದ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದ್ದು ಮಂಜಮ್ಮನವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ತಂದೆ ಬಿ.ಹನುಮಂತಶೆಟ್ಟಿ, ತಾಯಿ ಬಿ.ವಿಜಯಲಕ್ಷ್ಮಿ ಅವರ ಉದರದಲ್ಲಿ ದಿ. 20-05-1957 ರಲ್ಲಿ ಜನಿಸಿದರು. ಎಸ್.ಎಸ್.ಎಲ್. ಸಿ ಶಿಕ್ಷಣವನ್ನು ಪೂರೈಸಿದ ಇವರು ರೇಣುಕೆ ಯಲ್ಲಮ್ಮನ ಕೃಪೆಯಿಂದ ಅರಿಷಿಣ ಕುಂಕಮದ ಒಲುಮೆಯಾಗಿ ಗೆಜ್ಜೆನಾದಕ್ಕೆ ಹೆಜ್ಜೆನಾದ ಹಾಕಲು ಶುರುಮಾಡಿದ ಬಿ.ಮಂಜಮ್ಮರ ಜನಪದ ಲೋಕಕ್ಕೆ ಗುರುತುಗಳಾದವು. ಚಿಕ್ಕಹಳ್ಳಿಯಲ್ಲಿ ಜನಿಸಿದರೂ ಆರಂಭದಲ್ಲಿ ಇವರು ಅನುಭವಿಸಿದ ದುಗುಡ-ದುಮ್ಮಾನಗಳೇ ಇಂದಿನ ಮಾನ-ಸನ್ಮಾನಗಳಿಗೆ ಸಾಕ್ಷಿಯಾಗಿವೆ. ರೇಣುಕಾ ಯಲ್ಲಮ್ಮನ ಕಥೆಯಲ್ಲಿ ಕಾರ್ತಿವೀರಾರ್ಜುನ, ರೇಣುಕರಾಜನ ಪಾತ್ರ ಸೇರಿದಂತೆ ಹತ್ತು-ಹಲವು ಪಾತ್ರ ನಿರ್ವಹಿಸಿ ರಾಜ್ಯೋತ್ಸವ, ಪದ್ಮಶ್ರೀ ಪ್ರಶಸ್ತಿ ಸೇರಿ ನೂರಾರು ಪುರಸ್ಕಾರಗಳಿಗೆ ಭಾಜನಾರಗಿದ್ದಾರೆ. ಸಧ್ಯ ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ. ಇಂತಹ ಮಹಾನ್ ಮೇಧಾವಿ ಬಿ.ಮಂಜಮ್ಮನವರಿಗೆ ಪ್ರಸ್ತುತ ಕರ್ನಾಟಕ ಸರಕಾರದ ಸಾರಿಗೆ ಮಂತ್ರಿಗಳಾದ ಬಿ.ಶ್ರೀರಾಮುಲುರವರ ಮಾತೋಶ್ರೀ ದಿ.ಹೊನ್ನೂರಮ್ಮನವರ ಸ್ಮರಣಾರ್ಥ ಜನಪದ ಕ್ಷೇತ್ರದಿಂದ 2020-21 ನೇ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇದೇ ಸೆ. 16 ರಂದು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುವ ಪಂ.ಪುಟ್ಟರಾಜ ಗವಾಯಿಗಳವರ 11 ನೇ ಪುಣ್ಯಸ್ಮರಣೋತ್ಸವದಲ್ಲಿ ಸಾಧಕರಿಗೆ ನಗದು, ಪ್ರಮಾಣಪತ್ರದೊಂದಿಗೆ ಗೌರವಿಸಲಾಗುತ್ತಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌,ಹುಬ್ಬಳ್ಳಿ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English