ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೊಬೈಲ್ ಟವರ್‌ಗಳಿಂದ ಆ ವ್ಯಾಪ್ತಿಗೆ ಒಳಪಟ್ಟ ಜನರಲ್ಲಿ ಮಾನಸಿಕ ಖಿನ್ನತೆ, ಬುದ್ಧಿಮಾಂದ್ಯ, ಕ್ಯಾನ್ಸರ್ ರೋಗ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿ ಡಾ| ಒ.ಆರ್. ಶ್ರೀರಂಗಪ್ಪ ತಿಳಿಸಿದರು. ಗುರುವಾರ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ 10ನೇ ಜಿಲ್ಲಾ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
ಮೊಬೈಲ್ ಟವರ್ ಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಮೊಬೈಲ್ ಟವರ್‌ನಿಂದ 500 ಮೀ. ವ್ಯಾಪ್ತಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಿಂದ ನರಳುತ್ತಿರುವವರ ಸಮೀಕ್ಷೆ ನಡೆಸಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಇದರಂತೆ ಜಿಲ್ಲೆಯ ಮಂಗಳೂರು ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಿಂದ ವರದಿ ಬಂದಿದೆ. ವರದಿಯಂತೆ ಈ ಪರಿಸರದಲ್ಲಿ ಮಾನಸಿಕ ಖಿನ್ನತೆ, ಬುದ್ಧಿಮಾಂದ್ಯ, ಕ್ಯಾನ್ಸರ್ ರೋಗ ಅಧಿಕ ಪ್ರಮಾಣದಲ್ಲಿ ಕಂಡುಬಂದಿದೆ. ಮಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯ ಸಮೀಕ್ಷೆ ವರದಿ ಇನ್ನಷ್ಟೇ ಬರಬೇಕಾಗಿದೆ ಎಂದರು.
ಜಿಲ್ಲೆಯ ಕೊರಗ ಸಮುದಾಯದವರಿಗೆ ಮನೆ ನಿರ್ಮಾಣ ಕ್ಕೆ ಈವರೆಗೆ ಚರ್ಚಿಸಲಾಗಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸರಕಾರದ ಅನುಮತಿ ಲಭಿಸದ ಕಾರಣ ಫಲಾನುಭವಿ ಆಧಾರಿತ ಮನೆ ನಿರ್ಮಾಣಕ್ಕೆ ವಿಳಂಬ ಆಗುತ್ತಿರುವ ಬಗ್ಗೆ ಸಿಇಒ ಡಾ. ಕೆ.ಎನ್. ವಿಜಯಪ್ರಕಾಶ್ ವಿಷಾದ ಸೂಚಿಸಿದರು. ಆದರೂ ಮನೆ ನಿರ್ಮಿಸಿಕೊಡುವ ಸಂಬಂಧ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಟವರ್‌ನಿಂದ ಆಗುತ್ತಿರುವ ವಿಕಿರಣಗಳ ಬಗ್ಗೆ ವಿವರವಾಗಿ ಮಾತನಾಡಿದ ಬಿಜೆಪಿ ಸದಸ್ಯ ಸಂತೋಷ್ ಕುಮಾರ್ ಅವರ ಮಾತು ದೀರ್ಘವಾಗುತ್ತಿರುವುದನ್ನು ಅರಿತು ಕಾಂಗ್ರೆಸ್ ಸದಸ್ಯರು ‘ರಾಮಾಯಣವೆಲ್ಲ ಬೇಡ’ ಎಂದು ಹೇಳಿದರು. ಇದಕ್ಕೆ ಕೋಪಗೊಂಡ ಸಂತೋಷ್ ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಿಮ್ಮ ಹಾಗೆ ಕುಟುಂಬದ ಸಮಸ್ಯೆ ಬಗ್ಗೆ ಮಾತನಾಡಿಲ್ಲ ಎಂದು ಪ್ರತ್ಯುತ್ತರಿಸಿದರು. ಇದರಿಂದಾಗಿ ಸಭೆಯಲ್ಲಿ ಸ್ವಲ್ಪ ಕಾಲ ಗಲಭೆ ಏರ್ಪಟ್ಟರೂ ಬಳಿಕ ಸಭೆ ಶಾಂತವಾಯಿತು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಜಯಶ್ರೀ, ಫಕೀರ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English