ಬರುವ ದಿನಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಸೂಕ್ತ ತೀರ್ಮಾನ: ಸಚಿವ ಆರ್ ಅಶೋಕ

4:59 PM, Thursday, September 16th, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka ಬೆಂಗಳೂರು  : “ಸುಪ್ರೀಂ ಕೋರ್ಟ್‍ನ ತೀರ್ಪನ್ನು ಯಥಾವತ್ತಾಗಿ ಪಾಲನೆ ಮಾಡುವುದು ಕರ್ತವ್ಯ. ಆದರೆ ಆ ಧಾವಂತದಲ್ಲಿ ಅಧಿಕಾರಿಗಳು ಈ ರೀತಿಯ ಅವಸರದ ತೀರ್ಮಾನ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಜಿಲ್ಲಾಡಳಿತದಿಂದ ಜನರ ಭಾವನೆಗಳಿಗೆ ಧಕ್ಕೆಯಾಗದಂತಹ ತೀರ್ಮಾನ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

ನಂಜನಗೂಡು ಮತ್ತು ಮೈಸೂರಿನಲ್ಲಿನ ದೇವಸ್ಥಾನ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು,”ಅಧಿಕಾರಿಗಳು ಹೀಗೆ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದು ತಪ್ಪು. ಸುಪ್ರೀಂ ಕೋರ್ಟ್ ಕೂಡಾ ರಸ್ತೆ ಮಧ್ಯದಲ್ಲಿರುವ ಧಾರ್ಮಿಕ ಕಟ್ಟಡಗಳನ್ನ ತೆರವುಗೊಳಿಸುವ ಮುನ್ನ ಸಾಕಷ್ಟು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಿದೆ. ದೇವಸ್ಥಾನ ಪುರಾತನವಾಗಿದ್ದರೆ, ಸ್ಥಳಾಂತರಗೊಳಿಸಲು ಪ್ರಯತ್ನಿಸುವಂತೆ ತಿಳಿಸಿದೆ. ಬೇರೆ, ಬೇರೆ ಸಾಧ್ಯತೆಗಳಿದ್ದಾಗಲೂ ಅಧಿಕಾರಿಗಳು ಈ ರೀತಿಯ ತೀರ್ಮಾನ ಮಾಡಬಾರದಾಗಿತ್ತು. ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದೇನೆ. ದೇವಸ್ಥಾನ, ಮಸೀದಿ ಅಥವಾ ಚರ್ಚ್ ಏನೇ ಆಗಿದ್ದರು ಎಲ್ಲದಕ್ಕೂ ಒಂದೇ ಮಾನದಂಡವನ್ನ ಅಧಿಕಾರಿಗಳು ಪಾಲಿಸಬೇಕು. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ”, ಎಂದರು.

“ಇನ್ನು ಮುಂದೆ ಬೇರೆ ಯಾವ ಜಿಲ್ಲೆಗಳಲ್ಲಿಯೂ ಈ ರೀತಿಯ ಕ್ರಮ ತೆಗೆದುಕೊಳ್ಳುವುದಕ್ಕಿಂತ ಮೊದಲು ಸುಪ್ರೀಂ ಕೋರ್ಟ್ ನ ಆದೇಶವನ್ನ ಸಮಗ್ರವಾಗಿ ಪರಿಗಣನೆಗೆ ತೆಗೆದುಕೊಂಡೆ ನಿರ್ಧಾರ ತೆಗೆದುಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಮತ್ತು ಜನರ ಭಾವನೆ ಎರಡನ್ನೂ ಪರಿಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು. ಜನತೆಯ ಭಾವನೆಗಳಿಗೆ ಧಕ್ಕೆಯಾಗದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಈ ರೀತಿಯ ನಿರ್ಧಾರಗಳಲ್ಲಿ ಅಗತ್ಯ ಎಂಬುದು ಕೂಡಾ ನನ್ನ ಅಭಿಪ್ರಾಯವಾಗಿದೆ”, ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English