ಕಾಸರಗೋಡು : ನಾಮಪತ್ರ ಹಿಂಪಡೆಯಲು ಬಿಎಸ್ಪಿ ಅಭ್ಯರ್ಥಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ಕ್ರೈಂ ಬ್ರಾಂಚ್ ಗುರುವಾರ ವಿಚಾರಣೆ ಗೊಳಪಡಿಸಿದೆ.
ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ ಯಾರೆಂದು ತನಗೆ ಗೊತ್ತಿಲ್ಲ. ತನ್ನ ಮೇಲೆ ರಾಜಕೀಯ ಪ್ರೇರಿತ ಪ್ರಕರಣವನ್ನು ಹೂಡಲಾಗಿದೆ. ನಾಮಪತ್ರ ಹಿಂತೆಗೆಯಲು ಅರ್ಜಿಗೆ ಸಹಿ ಹಾಕಲಾಗಿದೆ ಎಂಬ ಸುಂದರ ತಿಳಿಸಿರುವ ತಾಲಿಪಡ್ಪುವಿನ ಹೋಟೆಲ್ ನಲ್ಲಿ ತಾನು ವಾಸ್ತವ್ಯ ಹೂಡಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಸುರೇಂದ್ರನ್ ಹೇಳಿಕೆ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹಾಜರಾದ ಸುರೇಂದ್ರನ್ ಅವರನ್ನು ಕಾಸರಗೋಡು ಅತಿಥಿ ಗ್ರಹದಲ್ಲಿ ಜಿಲ್ಲಾ ಕ್ರೈಂ ಬ್ರಾಂಚ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಕೇರಳ ವಿಧಾನಸಭಾ ಚುನಾವಣೆಗೆ ಮಂಜೇಶ್ವರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುರೇಂದ್ರನ್ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ಅವರನ್ನು ಕಣದಿಂದ ಹಿಂದೆ ಸರಿಯಲು ಸುಂದರರ ಮನೆಗೆ ತೆರಳಿ ಎರಡೂವರೆ ಲಕ್ಷ ರೂ. ನಗದು, ಮೊಬೈಲ್ ಫೋನ್ ನೀಡಿದ್ದು, ಸುರೇಂದ್ರನ್ ಗೆದ್ದಲ್ಲಿ ಹೊಸ ಮನೆ, ಮಂಗಳೂರಿನಲ್ಲಿ ಬಾರ್ ಲೈಸನ್ಸ್ ನೀಡುವುದಾಗಿ ಆಮಿಷ ನೀಡಿದ್ದಾಗಿ ಚುನಾವಣೆ ಕಳೆದು ಒಂದು ತಿಂಗಳ ಬಳಿಕ ಕೆ.ಸುಂದರ ರವರೆ ಬಹಿರಂಗ ಪಡಿಸಿದ್ದರು ಎಂದು ಹೇಳಲಾಗಿದೆ.
ಅದರಂತೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬದಿಯಡ್ಕ ಪೊಲೀಸರು ಆರಂಭದಲ್ಲಿ ತನಿಖೆ ನಡೆಸಿದ್ದು, ಬಳಿಕ ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ಎಲ್‌ಡಿಎಫ್ ಅಭ್ಯರ್ಥಿಯಾಗಿದ್ದ ವಿ.ವಿ ರಮೇಶನ್ ಸಲ್ಲಿಸಿದ್ದ ದೂರಿನಂತೆ ಕಾಸರಗೋಡು ನ್ಯಾಯಾಲಯದ ಆದೇಶದಂತೆ ಕೆ.ಸುರೇಂದ್ರನ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.
ತನಿಖಾ ತಂಡ ಕೆ. ಸುಂದರ, ಅವರ ತಾಯಿ ಬೇಡ್ಜಿ, ಬಿಜೆಪಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಣಿಕಂಠ ರೈ, ಯುವ ಮೋರ್ಚಾ ರಾಜ್ಯ ನಾಯಕ ಸುನಿಲ್ ನಾಯ್ಕ್, ವಿ. ಬಾಲಕೃಷ್ಣ ಶೆಟ್ಟಿ ಹಾಗೂ ಇನ್ನಿತರ ಜಿಲ್ಲಾ ನಾಯಕ ರಿಂದ ವಿವಿಧ ಹಂತಗಳಲ್ಲಿ ಮಾಹಿತಿ ಕಲೆ ಹಾಕಿತ್ತು. ಪ್ರಕರಣ ದಾಖಲಾಗಿ ಮೂರು ತಿಂಗಳ ಬಳಿಕ ಕೆ.ಸುರೇಂದ್ರನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಡಿವೈಎಸ್ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ಸುರೇಂದ್ರನ್ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ.
Click this button or press Ctrl+G to toggle between Kannada and English