ಮಂಗಳೂರು : ಪ್ರಧಾನಿಗಳಾದ ಐ.ಕೆ. ಗುಜ್ರಾಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಅಧಿಕಾರಿಯಾಗಿದ್ದ. ವಿದೇಶಾಂಗ ಇಲಾಖೆಯ ಶಿಷ್ಟಾಚಾರ ವಿಭಾಗದ ಉಪ ಮುಖ್ಯಸ್ಥೆಯಾಗಿದ್ದ ದೇಶದ ಪ್ರಪ್ರಥಮ ಮಹಿಳಾ ಅಧಿಕಾರಿ ಈಗ ಪೋಲೆಂಡ್‌ನ ಭಾರತೀಯ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಕಾಸರಗೋಡಿನ ಮುಹಮ್ಮದ್ ಹಬೀಬುಲ್ಲಾ ಅವರ ಪುತ್ರಿ ನಗ್ಮಾ ಮುಹಮ್ಮದ್ ಮಲಿಕ್ ಪೋಲೆಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿ ನಿಯುಕ್ತಿಗೊಂಡಿದ್ದಾರೆ.
ನಗ್ಮಾ ಮುಹಮ್ಮದ್ ಮಲಿಕ್, ಕಾಸರಗೋಡಿನ ಫೋರ್ಟ್ ರೋಡ್‌ನಲ್ಲಿ ವಾಸವಾಗಿದ್ದರು. ತಂದೆ ಹಬೀಬುಲ್ಲಾ ಅವರು ಕೇಂದ್ರ ಸರಕಾರದ ಸಾಗರೋತ್ತರ ಸಂವಹನ ಇಲಾಖೆಯಲ್ಲಿ ಕೆಲಸಕ್ಕೆ ನಿಯುಕ್ತಿಗೊಂಡ ಬಳಿಕ ಕುಟುಂಬ ಸಮೇತ ಕಾಸರಗೋಡಿ ನಿಂದ ದಿಲ್ಲಿಗೆ ತೆರಳಿದ್ದರು. ನಗ್ಮಾ ಹುಟ್ಟಿ ಬೆಳೆದಿದ್ದು ದಿಲ್ಲಿಯಲ್ಲಿ. ಸೈಂಟ್ ಸ್ಟೀಫನ್ಸ್ ಕಾಲೇಜು ಮತ್ತು ದಿಲ್ಲಿಯ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ ಅವರು, ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
1991ರಲ್ಲಿ ವಿದೇಶಾಂಗ ಇಲಾಖೆಯಲ್ಲಿ ವೃತ್ತಿ ರಾಜತಾಂತ್ರಿಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಪ್ಯಾರಿಸ್‌ನ ಯುನೆಸ್ಕೋ ಭಾರತೀಯ ಮಿಷನ್‌ಗೆ ಮೊದಲ ನಿಯೋಜನೆಗೊಂಡ ನಂತರ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಅಲ್ಲದೆ ತುನಿಷಿಯಾ ಮತ್ತು ಬ್ರೂನಿ ರಾಷ್ಟ್ರಗಳ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಕಟ್ಮಂಡು, ಕೊಲಂಬೋ, ಬ್ಯಾಂಕಾಕ್ ಗಳ ಭಾರತೀಯ ರಾಯಭಾರ ಕಚೇರಿಗಳಲ್ಲೂ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರು ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ಅಣ್ಣನ ಪುತ್ರಿಯೂ ಆಗಿದ್ದಾರೆ.
Click this button or press Ctrl+G to toggle between Kannada and English