ಬಾಕಿ ಉಳಿದಿರುವವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಡಿಸಿ

6:05 PM, Friday, September 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

Press Club Vaccination ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ.80ರಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಆದರೆ ಬಾಕಿ ಉಳಿದವರಿಗೆ ಲಸಿಕೆ ಹಾಕಿಸುವುದು ತುಂಬಾ ಸವಾಲಿನ ಕೆಲಸ ಆಗಲಿದೆ. ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಇಂದಿನ ಲಸಿಕಾ ಅಭಿಯಾನವನ್ನು ಮಾಡುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಲಾದ ಕೋವಿಡ್ 19 ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವಾರ ಲಕ್ಷ ಮಂದಿಗೆ ಲಸಿಕೆ ಹಾಕಿಸುವ ಗುರಿ ಇಟ್ಟುಕೊಂಡು ಅಭಿಯಾನ ನಡೆಸಿದ್ದೆವು. ಆದರೆ ಪೂರ್ವ ಸಿದ್ಧತೆಗಳಿಲ್ಲದ ಕಾರಣಕ್ಕೆ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯವಾಗಿರಲಿಲ್ಲ. ಈ ಬಾರಿಯ ಅಭಿಯಾನದಲ್ಲಿ 1.50 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇಟ್ಟು ಅಭಿಯಾನ ನಡೆಸುತ್ತಿದ್ದೇವೆ. ಆದರೆ ಈ ಬಾರಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಸುಮಾರು 600ಕ್ಕೂ ಹೆಚ್ಚು ಕೇಂದ್ರಗಳನ್ನು ನಿಗದಿಪಡಿಸಿ ಲಸಿಕೆ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಲಸಿಕೆ ಅಭಿಯಾನಕ್ಕೆ ಚುನಾವಣೆ ಮಾದರಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಬಹುತೇಕ ಎಲ್ಲ ಇಲಾಖೆಯ ಸಿಬ್ಬಂದಿಗಳನ್ನು ಈ ಅಭಿಯಾನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಈ ಅಭಿಯಾನವನ್ನು ಯಶಸ್ವಿಗೊಳಿಸಿ ಎಲ್ಲರಿಗೂ ಲಸಿಕೆ ಹಾಕಿಸುವಂತೆ ಮಾಡುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.1.3ರ ಆಸುಪಾಸಿನಲ್ಲಿದೆ. ಇದನ್ನು ಇನ್ನಷ್ಟು ಇಳಿಸುವ ಬಗ್ಗೆ ನಾವು ಗಮನ ಕೇಂದ್ರೀಕರಿಸುತ್ತಿದ್ದೇವೆ. ಸಾವಿನ ಪ್ರಮಾಣದಲ್ಲೂ ಇಳಿಕೆಯಾಗಿದೆ. ಅದರಲ್ಲೂ ಎರಡು ಡೋಸ್ ಲಸಿಕೆ ಹಾಕಿದವರಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ ಎಂದು ಅವರು ತಿಳಿಸಿದರು.

ಕೆಐಒಸಿಎಲ್ ಸಿಎಂಡಿ ಟಿ .ಸಾಮಿನಾಥನ್,ಮಹಾ ಪ್ರಭಂದಕ ರಾಮಕೃಷ್ಣ ರಾವ್, ಹಿರಿಯ ಅಧಿಕಾರಿಗಳಾದ ಮುರಳೀಧರ ,ಮುರುಗೇಶ್ ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ಪದಾಧಿಕಾರಿಗಳಾದ ಪುಷ್ಪರಾಜ್ ಬಿ ಎನ್,ಭಾಸ್ಕರ್ ರೈ ಕಟ್ಟ,ಸುರೇಶ್ ಪಳ್ಳಿ ಉಪಸ್ಥಿತರಿದ್ದರು .

ಬಳಿಕ ಜಿಲ್ಲಾಧಿಕಾರಿಯವರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು .ವೈದ್ಯರಿಂದ ಮಾಹಿತಿ ಪಡೆದುಕೊಂಡರು .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English