ಮಂಗಳೂರು : ಕರಾವಳಿ ಕರ್ನಾಟಕದ ಗ್ರಾಮೀಣ ಪ್ರದೇಶದ ಕ್ರೀಡಾಳುಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದ ಬಹು ನಿರೀಕ್ಷಿತ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ ಇದೇ ಜನವರಿ 18,19 ಮತ್ತು 20,2013 ರಂದು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು ಇದರ ಬಳಿಯಲ್ಲಿರುವ ಗದ್ದೆಯಲ್ಲಿ ನಡೆಯಲಿದ್ದು, ಪ್ರವೇಶ ಪತ್ರಗಳ ಸ್ವೀಕೃತಿ ಡಿಸೆಂಬರ್ ಒಂದರಿಂದ ಆರಂಭವಾಗಿದ್ದು ಈಗಾಗಲೇ 1500ಕ್ಕಿಂತಲೂ ಹೆಚ್ಚು ಪ್ರವೇಶಪತ್ರಗಳು ಬಂದಿದ್ದು, ಈ ವರ್ಷ ದಾಖಲೆ ಸಂಖ್ಯೆಯ ಸ್ಪರ್ಧಾಳುಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಕ್ರೀಡೋತ್ಸವದ ಮುಖ್ಯ ಸಂಘಟಕ ವಿಜಯನಾಥ ವಿಠಲ ಶೆಟ್ಟಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷದ ಕ್ರೀಡೋತ್ಸವದ ಯಶಸ್ಸು ಸಂಘಟಕರಿಗೆ ಈ ವರ್ಷ ಹಲವಾರು ಹೊಸ ಸ್ಪರ್ಧೆಗಳನ್ನು ಆಯೋಜಿಸಲು ಪ್ರೇರೇಪಿಸಿದೆ. ಸ್ಪರ್ಧಾಕಾಂಕ್ಷಿಗಳ ಅನುಕೂಲಕ್ಕಾಗಿ ಈ ವರ್ಷ ಪ್ರವೇಶ ಪತ್ರ ಪಡೆಯುವ ಕೊನೆಯ ದಿನಾಂಕವನ್ನು ಜನವರಿ 13ಕ್ಕೆ ವಿಸ್ತರಿಸಿದ್ದೇವೆ ಮತ್ತು ಈ ವರ್ಷ ಹೊಸ ಆಟಗಳಾದ ಇಟ್ಟಿಗೆಯ ಮೇಲೆ ನಡಿಗೆ, ಮಣ್ಣಿನ ಕುಸ್ತಿ, ಪಿರೆಮಿಡ್ ಮತ್ತು ಚೆಂಡಿನ ಆಟ ಹೆಚ್ಚಿನ ಜನರನ್ನು ಆಕರ್ಷಿಸಲಿವೆ. ಈ ವರ್ಷ ಒಟ್ಟು 40 ವೈವಿಧ್ಯಮಯ ಗ್ರಾಮೀಣ ಸ್ಪರ್ಧೆಗಳು, 70 ವಿಭಾಗಗಳಲ್ಲಿ ನಡೆಯುವವು. ಬಹುಮಾನಗಳ ಒಟ್ಟು ಮೊತ್ತ ರೂ.15 ಲಕ್ಷ ವಿಜೇತರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಜನರನ್ನು ಒಗ್ಗೂಡಿಸಲು ಮತ್ತು ಗ್ರಾಮೀಣ ಜನತೆಗೆ ಆಟಗಾರರ ತಂಡಗಳನ್ನು ರಚಿಸಲು ಪ್ರೇರೇಪಿಸಲು ಅತಿ ಹೆಚ್ಚು ಅಂಕ ಗಳಿಸಿದ ಹಳ್ಳಿಗೆ ಶ್ರೇಷ್ಠ ಹಳ್ಳಿ ಪ್ರಶಸ್ತಿ ನೀಡಲಾಗುವುದು. ಶ್ರೇಷ್ಠ ಹಳ್ಳಿಗಳಿಗೆ ಟ್ರೋಫಿಯಲ್ಲದೆ ರೂ. ಒಂದು ಲಕ್ಷ ಮತ್ತು ರೂ. 50,000 ನಗದು ಬಹುಮಾನಗಳನ್ನು ನೀಡಲಾಗುವುದು. ಈ ವರ್ಷವೂ ಸಿನೆಮಾ ತಾರೆಯರು ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಕ್ರೀಡೋತ್ಸವವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ರಮಾನಾಥ ರೈ ಮತ್ತು ಮಾಜಿ ಸಚಿವ ನಾಗರಾಜ ಶೆಟ್ಟಿಯವರು ಜನವರಿ 18ರ ಬೆಳಿಗ್ಗೆ 9 ಗಂಟೆಗೆ ಉದ್ಘಾಟಿಸಲಿರುವರು.
ವಿಶೇಷ ಆಕರ್ಷಣೆಯಾಗಿ ಜನವರಿ 18 ರಂದು ಸಂಜೆ 6 ಗಂಟೆಗೆ ಮನಸ್ದ ಉಲ್ಲಾಸೊಗು ಬೋಡಾದು ಎಂಚಿನಲಾ ಮಲ್ಪುವ ಎಂಬ ಪ್ರತಿಭಾ ಸ್ಪರ್ಧೆ ನಡೆಯಲಿರುವುದು. ಸೋನಿ ಟಿವಿಯ ಎಂಟರ್ಟೇನ್ ಮೆಂಟ್ ಕೇ ಲಿಯೇ ಕುಛ್ ಭೀ ಕರೇಗಾ ಮಾದರಿಯಲ್ಲಿ ಈ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ರೂ. 25,000 ನಗದು ಬಹುಮಾನ ನೀಡಲಾಗುವುದು. ಜನವರಿ 19ರ ಸಂಜೆ 7.30ರಿಂದ ಬಾಯ್ ಝೋನ್ ಡ್ಯಾನ್ಸ್ ತಂಡದಿಂದ ನೃತ್ಯ ಮತ್ತು ಬ್ಯಾಂಕ್ ಜನಾರ್ದನ್ ಅವರಿಂದ ಹಾಸ್ಯ ಮತ್ತು ಮಿಮಿಕ್ರಿ ಕಾರ್ಯಕ್ರಮ ಜರುಗಲಿದೆ. ಜನವರಿ 20ರ ಸಂಜೆ 7ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು.
ಸರ್ವ ಜಾತಿ, ಮತ, ಧರ್ಮದವರಿಗೂ ಈ ಕ್ರೀಡೋತ್ಸವಕ್ಕೆ ಸ್ವಾಗತವಿದೆ. ಪ್ರವೇಶಪತ್ರಗಳನ್ನು ದೇವಸ್ಥಾನದ ಕಚೇರಿಯಿಂದ ಪಡೆದುಕೊಳ್ಳಬಹುದು. ಪ್ರವೇಶಪತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ ಜನವರಿ 13, 2013. ವಿಳಾಸ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು 57467. ಹೆಚ್ಚಿನ ಮಾಹಿತಿ ಮತ್ತು ಪ್ರವೇಶ ಪತ್ರಗಳನ್ನು ಅಧಿಕೃತ ವೆಬ್ ಸೈಟ್ www.bhoothanatheshwara.com ನಲ್ಲಿ ಪಡೆಯಬಹುದು.
Click this button or press Ctrl+G to toggle between Kannada and English