ಮಂಗಳೂರು : ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಚೇತನಗಳಾದ ಸರೋಜಾ ರಾವ್ ಮತ್ತು ಎಂ.ಆರ್. ಸಾಯಿನಾಥ್ ಅವರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಗೀತ ಗುರುಪರಂಪರೆಯ ಶಿಕ್ಷಣ ಪದ್ಧತಿಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಶಕ್ತಿ ನೀಡಿದ ಕೆಲವೇ ಕೆಲವರಲ್ಲಿ ಸರೋಜಮ್ಮ ಒಬ್ಬರಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಸರೋಜಮ್ಮ ಅವರದು ನಿಷ್ಕಲ್ಮಶ ವ್ಯಕ್ತಿತ್ವವಾಗಿತ್ತು. ಇವರ ಅಗಲಿಕೆಯಿಂದ ಸಂಗೀತ ಲೋಕದ ಹಳೆತಲೆಮಾರಿನ ಕೊಂಡಿಯೊಂದು ಕಳಚಿದಂತಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿನಮನ ಸಲ್ಲಿಸಿದರು.
ಮೃದಂಗವಾದಕ ಎಂ.ಆರ್. ಸಾಯಿನಾಥ್ ಕೂಡಾ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಓರ್ವರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಗೆ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಿದ್ದ ಸಾಯಿನಾಥ್, ಪ್ರಮುಖವಾಗಿ ಭಕ್ತಿ ಸಂಗೀತಕ್ಕೆ ಬಲುದೊಡ್ಡ ಶಕ್ತಿಯನ್ನು ತುಂಬಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಕರಾವಳಿ ಪ್ರದೇಶಕ್ಕೆ ಸಂಗೀತ ಕ್ಷೇತ್ರದ ದೊಡ್ಡ ಕಲಾವಿದರು ಕಾರ್ಯಕ್ರಮ ನೀಡಲು ಬಂದಾಗ, ಬಹುತೇಕ ಎಲ್ಲರಿಗೂ ಸಾಥ್ ನೀಡಲು ಒದಗಿ ಬರುತ್ತಿದ್ದುದು ಸಾಯಿನಾಥ್ ಅವರೇ ಎಂಬುದು ಅವರ ಹೆಗ್ಗಳಿಕೆಯಾಗಿದೆ ಎಂದು ಸ್ಮರಿಸಿದರು.
ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ನಿತ್ಯಾನಂದ ಕಾರಂತ ಪೊಳಲಿ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ಡಾ. ಮಂಜುಳಾ ಶೆಟ್ಟಿ, ವಿಜಯಲಕ್ಷ್ಮಿ ಬಿ. ಶೆಟ್ಟಿ ಮುಂತಾದವರು ದಿವಂಗತರಿಗೆ ನುಡಿನಮನ ಸಲ್ಲಿಸಿದರು. ವಸಂತ ಕದ್ರಿ ಮುರಳೀಧರ ಕಾಮತ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English