ಮಂಗಳೂರು : ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಕೋವಿಡ್-19 ಪ್ರಕರಣಗಳ ಸಂಭಾವ್ಯ ಏರಿಕೆಯನ್ನು ತಡೆಯಲು ಈವರೆಗೆ ಹೊರಡಿಸಿರುವ ಮಾರ್ಗಸೂಚಿ ಮತ್ತು ಅದೇಶಗಳಿಗೆ ಕೆಲವೊಂದು ಸೇರ್ಪಡೆಗಳು ಮತ್ತು ಮಾರ್ಪಾಡುಗಳನ್ನು ಮಾಡಿ ಸರಕಾರ ಆದೇಶಿಸಿರುತ್ತದೆ.
ಈ ಆದೇಶಗಳು ಹಾಗೂ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ ಕೋವಿಡ್-19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 141 (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈವರೆಗೆ ಹೊರಡಿಸಿರುವ ನಿರ್ಬಂಧ / ಮಾರ್ಗಸೂಚಿ ಮತ್ತು ಆದೇಶಗಳಿಗೆ ಕೆಲವೊಂದು ಸೇರ್ಪಡೆಗಳು ಮತ್ತು ಮಾರ್ಪಾಡುಗಳನ್ನು ಮಾಡಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆವಿ. ಅವರು ಆದೇಶ ಹೊರಡಿಸಿರುತ್ತಾರೆ.
ಅವುಗಳು ಇಂತಿವೆ:
ಪ್ರಸ್ತುತ ಚಾಲ್ತಿಯಲ್ಲಿರುವ ರಾತ್ರಿ ಕಫ್ರ್ಯೂ ಮುಂದುವರೆಯಲಿದ್ದು, ಸೆಪ್ಟೆಂಬರ್ 25 ರಿಂದ ಅನ್ವಯಿಸುವಂತೆ ರಾತ್ರಿ ಕಫ್ರ್ಯೂ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಅಕ್ಟೋಬರ್ 1ರಿಂದ ಕಡ್ಡಾಯವಾಗಿ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಶೇ.50ರಷ್ಟು ಆಸನ ಸಾಮಥ್ರ್ಯದೊಂದಿಗೆ ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ಥಿಯೇಟರ್, ರಂಗಮಂದಿರ ಹಾಗೂ ಆಡಿಟೋರಿಯಂಗಳು ಮತ್ತು ಇದೇ ರೀತಿಯ ಸ್ಥಳಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇಂತಹ ಸ್ಥಳಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನಿಬರ್ಂಧವಿರುತ್ತದೆ ಹಾಗೂ ಇಂತಹ ಸ್ಥಳಗಳಿಗೆ ಗರ್ಭಿಣಿ ಸ್ತ್ರೀಯರು ಮತ್ತು ಹಿರಿಯ ನಾಗರೀಕರು ಭೇಟಿ ನೀಡದಂತೆ ಸಲಹೆ ನೀಡಲಾಗಿದೆ.
ಇಲ್ಲಿನ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು ಹಾಗೂ ಪ್ರತಿ ಪ್ರದರ್ಶನದ ನಂತರ ಮೇಲೆ ತಿಳಿಸಿದ ಸ್ಥಳಗಳ ವಿಶ್ರಾಂತ ಕೊಠಡಿಗಳು, ಶೌಚಾಲಯ ಸೇರಿದಂತೆ ಎಲ್ಲಾ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಪ್ರವೇಶ ಮತ್ತು ನಿರ್ಗಮನ ಅಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಜರನ್ನು ಸಂಬಂಧಪಟ್ಟ ಅಡಳಿತ ವರ್ಗ, ಮಾಲೀಕರು ಅಥವಾ ಸಂಘಟಕರು ಒದಗಿಸಬೇಕು.
ಅ.3ರಿಂದ ಕಡ್ಡಾಯವಾಗಿ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವ ಪರತ್ತಿಗೊಳಪಟ್ಟು ಪಬ್‍ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳ ಕಾರ್ಯಚರಣೆ ಬಗ್ಗೆ ಈಗಾಗಲೇ ಹೊರಡಿಸಲಾದ ಆದೇಶ ಮುಂದುವರೆಯುವುದು.
ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶವಿರುವ ಗಡಿಭಾಗಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಕಾರ್ಯವನ್ನು ಮುಂದುವರೆಸಬೇಕು.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60 ರನ್ವಯ, ಐಪಿಸಿ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4, 5 ಮತ್ತು 10 ರಂತೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English