ಮಂಗಳೂರು: ಸಾಹಿತ್ಯ ಬೆಳೆದಂತೆ ಬಾಷೆಯೂ ಬೆಳೆಯುತ್ತದೆ. ಹೀಗಾಗಿ ಎಲ್ಲಾ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆಯಾಗಬೇಕು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಆಶಿಸಿದ್ದಾರೆ.
ವಿ.ವಿ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾ ಭವನದಲ್ಲಿ ಗುರುವಾರ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ನಂದಾದೀಪ ಪ್ರಕಾಶನ ಕನ್ಯಾನ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʼಬೇಲಿʼ ಹಾಗೂ ʼಸಾಪೊದ ಕಣ್ಣ್ʼ ನಾಟಕ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೂಲತಃ ಹವ್ಯಕ ಬಾಷೆಯವರಾದ ಲೇಖಕಿ ಅಕ್ಷತಾರಾಜ್ ಪೆರ್ಲ ಅವರ ತುಳು ಪ್ರೀತಿಯನ್ನು ಶ್ಲಾಘಿಸಿದರು. “ಸಾಮಾಜಿಕ ಜಾಲತಾಣದಲ್ಲಿ ತುಳು ಬಾಷೆಯ ಬಳಕೆಯಾಗುತ್ತದೆ, ಆದರೆ ಬಾಷೆಯ ದಾಖಲಾತಿಗೆ ಕೃತಿಗಳ ರಚನೆಯಾಗಬೇಕು. ಲೇಖಕಿ ಮಾನವೀಯತೆಗೆ ಒತ್ತು ನೀಡಿರುವುದು ಇತರರಿಗೆ ಮಾದರಿ,” ಎಂದರು.
ಮಂಗಳೂರು ವಿ.ವಿ ಯ ಬ್ರಹ್ಮಶ್ರೀ ನಾರಾಯಣಗುರು ಪೀಠದ ಸಂಯೋಜಕ ಡಾ.ಗಣೇಶ್ ಅಮೀನ್ ಸಂಕಮಾರ್, ಸೂಕ್ಷ್ಮವಾಗಿ ಲೋಕ ತಿದ್ದುವ ಶಕ್ತಿ ನಾಟಕಗಳಿಗಿದೆ, “ಪುರಾಣದ ಪಾತ್ರಗಳನ್ನು ಈಗಿನ ಸಾಮಾಜಿಕ ಪರಿಸ್ಥಿತಿಗೆ ಅನ್ವಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಸಾಹಿತಿಗಳು ನಿರ್ಲಕ್ಷಿಸಿರುವ ಶಿಖಂಡಿ ಪಾತ್ರವನ್ನು ಲೇಖಕಿ ಆರಿಸಿಕೊಂಡು ಅದನ್ನು ಬೆಳೆಸಿರುವುದು ಅದ್ಭುತ. ಮಂಗಳಮುಖಿಯರು ಲೋಕಕ್ಕೆ ಮಂಗಳ ತರುವವರು ಎಂಬುದನ್ನು ಲೇಖಕಿ ನಿರೂಪಿಸಿದ್ದಾರೆ,” ಎಂದರು.
ಕೃತಿ ಪರಿಚಯ ಮಾಡಿದ ವಕೀಲ ಹಾಗೂ ರಂಗನಿರ್ದೇಶಕ ಶಶಿರಾಜ್ ಕಾವೂರು, ಬೇಲಿ ಹಾಗೂ ಸಾಪೊದ ಕಣ್ಣ್ ಕಣ್ಣು ನಾಟಕಗಳಲ್ಲಿ ನಾಟಕಕಾರನಿಗೆ ಇರಲೇಬೇಕಾದ ವಿವೇಚನಾಶಕ್ತಿ ಮತ್ತು ತರ್ಕವಿದೆ. ಸಣ್ಣ, ಚುರುಕಾದ, ಪರಿಣಾಮಕಾರಿ ನಿರೂಪಣೆ, ಜೊತೆಗೆ ಸಂಭಾಷಣೆಯಲ್ಲಿ ನಿರಂತರತೆಯಿದೆ. ಈ ನಾಟಕಗಳು ಆದಷ್ಟು ಬೇಗ ಬೇರೆ ಬಾಷೆಗೆ ತರ್ಜುಮೆಯಾದರೆ, ರಂಗ ಪ್ರಯೋಗವಾದರೆ ಒಳ್ಳೆಯದು, ಎಂದರು.
ಎಂ.ಆರ್.ಪಿ.ಎಲ್ ಪ್ರಶಿಕ್ಷಣ ವಿಭಾಗದ ಉಪಮಹಾಪ್ರಬಂಧಕಿ ವೀಣಾ.ಟಿ.ಶೆಟ್ಟಿ, ಚಿಕ್ಕ ಚಿಕ್ಕ ವಿಷಯಗಳನ್ನು ಅನುಭವಿಸುವ ಮನಸ್ಸಿದ್ದರೆ ಮಾತ್ರ ಇಂತಹ ಕೃತಿ ರಚನೆ ಸಾಧ್ಯ ಎಂದರು. ರಾಮಕೃಷ್ಣ ಮಿಷನ್ ನ ʼಸ್ವಚ್ಛ ಮನಸ್ʼ ರೂವಾರಿ ರಂಜನ್ ಬೆಳ್ಳರ್ಪಾಡಿ ಪ್ರಾದೇಶಿಕ ಭಾಷೆಗಳ ಬೆಳವಣಿಗೆಯ ಅಗತ್ಯತೆಯನ್ನು ಒತ್ತಿಹೇಳಿದರಲ್ಲದೆ, ರಾಮಕೃಷ್ಣ ಮಿಷನ್ ತುಳು ಬಾಷೆಯಲ್ಲಿ ವಿವೇಕಾನಂದರ ಸಂದೇಶಗಳ ಆಡಿಯೋ ಬುಕ್ ಹೊರತರುತ್ತಿದೆ, ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಅನುಸೂಯ ರೈ, ಲೇಖಕಿ ಅಕ್ಷತಾರಾಜ್ ಪೆರ್ಲ ಅವರಿಗೆ ಶುಭಹಾರೈಸಿದರು. ತಮ್ಮ ಎರಡೂ ಕೃತಿಗಳಿಗೆ ಪ್ರೇರಣೆಯಾದ ಘಟನೆಗಳನ್ನು ವಿವರಿಸಿದ ಅಕ್ಷತಾರಾಜ್ ಪೆರ್ಲ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ತುಳುಪೀಠದ ಸಂಯೋಜಕ ಡಾ. ಮಾಧವ ಎಂ ಕೆ ಅತಿಥಿಗಳನ್ನು ಸ್ವಾಗತಿಸಿದರು. ಗೀತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English