ಮಂಗಳೂರು :ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಸುದ್ದಿವಾಹಿನಿ ಕ್ಯಾಮರಾಮ್ಯಾನ್ ಶರಣ್ ಬಂಧನವನ್ನು ಖಂಡಿಸಿ ದೃಶ್ಯ ಮಾದ್ಯಮ ಪತ್ರಕರ್ತರ ಸಂಘ ಗುರುವಾರ ಬೀದಿಗಿಳಿದು ಹೋರಾಟ ನಡೆಸಿದರು. ಸಮಯ ನ್ಯೂಸ್ ಸುದ್ದಿ ವಾಹಿನಿಯ ವರದಿಗಾರ ಇರ್ಷಾದ್ ಮಾತನಾಡಿ ಪತ್ರಕರ್ತರು ವರದಿಯನ್ನು ಸಂಗ್ರಹಿಸಲು ಮಾತ್ರ ತೆರಳಿದ್ದು ಹೋಮ್ ಸ್ಟೇ ದಾಳಿಯ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವ ಮುನ್ನವೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದಲ್ಲಿ ಪತ್ರಕರ್ತರ ಪಾತ್ರ ಇಲ್ಲದಿರುವುದನ್ನು ಮನವರಿಕೆ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರು ಪತ್ರಕರ್ತರನ್ನು ಪ್ರಕರಣದಿಂದ ಕೈ ಬಿಡುವ ಭರವಸೆಯನ್ನೂ ನೀಡಿದ್ದರು. ಆದರೆ ಇದೀಗ ಅದೆಲ್ಲ ಈಡೇರದ ಭರವಸೆಯಾಗಿದ್ದು ಪತ್ರಕರ್ತರಿಬ್ಬರು ಜೈಲು ಸೇರುವಂತಾಗಿದೆ ಎಂದರು.
ಟಿವಿ ವರದಿಗಾರ ನವೀನ್ ಸೂರಿಂಜೆಯನ್ನು ಈಗಾಗಲೇ ಬಂಧಿಸಿದ್ದು ಅವರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವಾಗಲೇ ಈಗ ಶರಣ್ ರಾಜ್ ರನ್ನು ಬಂಧಿಸುವ ಮೂಲಕ ಪತ್ರಕರ್ತರು ಕೂಡ ಭಯದ ನೆರಳಿನಲ್ಲಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಇಂತಹ ಕಾರ್ಯದಿಂದಾಗಿ ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸತ್ಯ ವಿಷಯವನ್ನು ಸಮಾಜದ ಮುಂದೆ ತರಲು ಹೆದರುವಂತಹ ಪರಿಸ್ಥಿತಿ ಒದಗಿ ಬರಬಹುದು ಹಾಗಾಗಿ ರಾಜ್ಯ ಸರಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಬಂಧನಕ್ಕೊಳಗಾಗಿರುವ ಇಬ್ಬರೂ ಪತ್ರಕರ್ತರನ್ನು ಬಿಡುಗಡೆಗೊಳಿಸುವಂತೆ ಪೊಲೀಸರಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಶ್ರೀನಿವಾಸ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ, ಕಿರಣ್ ಸಿರ್ಸೀಕರ್, ಸುರೇಶ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English