ಧರ್ಮಸ್ಥಳದಲ್ಲಿ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ

10:42 PM, Saturday, October 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Dharmasthalaಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಮನ ಪರಿವರ್ತನೆ ಮೂಲಕ ಮದ್ಯ ವ್ಯಸನ ಮುಕ್ತ ಸಮಾಜ ರೂಪಿಸುವಲ್ಲಿ ಮಾಡಿದ ಸೇವೆ, ಸಾಧನೆ ಶ್ಲಾಘನೀಯವಾಗಿದೆ. ದೃಢ ಸಂಕಲ್ಪದಿಂದ ಮಾತ್ರ ವ್ಯವಸನ ಮುಕ್ತವಾದ ಆರೋಗ್ಯಪೂರ್ಣ ಸಮಾಜ ರೂಪಿಸಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಗಾಂಧಿ ಸ್ಮೃತಿ ಹಾಗೂ ವ್ಯಸನ ಮುಕ್ತ ಸಾಧಕರನ್ನು ಅಭಿನಂದಿಸಿ ಮಾತನಾಡಿದರು.

ವ್ಯಸನ ಮುಕ್ತ ಸಮಾಜ ರೂಪಿಸಲು ಹೋರಾಟ ಮಾಡುವಾಗ ಸಹಜವಾಗಿ ಸಮಾಜದಿಂದ ಅನೇಕ ರೀತಿಯಲ್ಲಿ ವಿರೋಧಗಳು ವ್ಯಕ್ತವಾಗುತ್ತವೆ. ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ, ರಾಮರಾಜ್ಯದ ಕಲ್ಪನೆ, ಸ್ವಚ್ಛತೆ ಮೊದಲಾದ ವಿಚಾರಗಳನ್ನು ಹೇಳುವುದು ಸುಲಭ. ಆದರೆ ಆಚರಣೆ ಮಾಡಿ ಅನುಷ್ಠಾನಕ್ಕೆ ತರುವುದು ಹರಸಾಹಸದ ಕೆಲಸವಾಗಿದೆ.

ದುಶ್ಚಟಕ್ಕೆ ಬಲಿಯಾದವರು ಚಟದಿಂದ ಮುಕ್ತರಾಗಲು ಬಹಳ ಕಷ್ಟವಾಗುತ್ತದೆ. ಆದರೆ ಹೆಗ್ಗಡೆಯವರ ನೇತೃತ್ವದಲ್ಲಿ ಅನೇಕ ಕುಟುಂಬಗಳಿಗೆ ಹೊಸ ಬೆಳಕನ್ನು ನೀಡಿ ಸಾರ್ಥಕ ಜೀವನ ನಡೆಸಲು ಪ್ರೋತ್ಸಾಹ ನೀಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಸರ್ಕಾರ ಕೂಡಾ ವ್ಯಸನ ಮುಕ್ತ ಸಮಾಜ ರೂಪಿಸಲು ಸೂಕ್ತ ಸಹಕಾರ ನೀಡುತ್ತದೆ ಎಂದು ಸಚಿವರು ಭರವಸೆ ನೀಡಿದರು. ಗಾಂಧೀಜಿಯವರ ವಿಚಾರಗಳು ಹಾಗೂ ತತ್ವಾದರ್ಶಗಳ ಬಗ್ಯೆ ಮಾತನಾಡುವುದಕ್ಕಿಂತಲೂ ಜೀವನದಲ್ಲಿ ಅನುಷ್ಠಾನಗೊಳಿಸಿದಲ್ಲಿ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
Dharmasthala
ಸಮಾವೇಶವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ, ಮದ್ಯ ವ್ಯಸನದಿಂದ ಮುಕ್ತರಾದಲ್ಲಿ ಸಪ್ತ ವ್ಯಸನಗಳಿಂದಲೂ ಮುಕ್ತರಾಗಬಹುದು. ಗಾಂಧೀಜಿಯವರ ತತ್ವಾದರ್ಶಗಳನ್ನು ವೀರೇಂದ್ರ ಹೆಗ್ಗಡೆಯವರು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಜನಜಾಗೃತಿ ವೇದಿಕೆ ಮೊದಲಾದವುಗಳ ಮೂಲಕ ಆತ್ಮವಿಶ್ವಾಸದಿಂದ ಸಮಸ್ಯೆಗಳನ್ನು ಪರಿಹರಿಸುವ ಬಗ್ಯೆ ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‌ಸಿಂಹ ನಾಯಕ್ ಶುಭಾಶಂಸನೆ ಮಾಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಅನೇಕ ಅಪಾಯ, ಭೀತಿಗಳನ್ನು ಎದುರಿಸಿ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮದ್ಯವ್ಯಸನಿಗಳನ್ನು ವ್ಯಸನ ಮುಕ್ತರಾಗಿ ಮಾಡಲು ನಿರಂತರ ಹೋರಾಟ ನಡೆಸಿದ ಜನಜಾಗೃತಿ ವೇದಿಕೆಯ ಕಾರ್ಯಕರ್ತರು ಜನಜಾಗೃತಿ ವಾರಿಯರ್‍ಸ್ (ಯೋಧರು) ಎಂದು ಹೆಗ್ಗಡೆಯವರು ಶ್ಲಾಘಿಸಿದರು. ಅವರ ಸೇವಾ ಯಜ್ಞಕ್ಕೆ ದೇವರ ಪೂರ್ಣ ಅನುಗ್ರಹ, ಆಶೀರ್ವಾದ ಇದೆ ಎಂದರು.

ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸುವವರು ನೈತಿಕವಾಗಿ ಬಲಿಷ್ಠವಾಗಿರುವುದರಿಂದ ಅವರು ದೀರ್ಘಾಯುಷಿಗಳಾಗಿರುತ್ತಾರೆ ಎಂದು ಅವರು ಹೇಳಿದರು.

ವ್ಯಸನ ಮುಕ್ತರ ಪರವಾಗಿ ಯಕ್ಷಗಾನ ಕಲಾವಿದ ಬದಿಯಡ್ಕದ ಜಯರಾಮ ಪಾಟಾಲಿ ಮತ್ತು ವೇಣೂರಿನ ಜಾರಪ್ಪ ಮೂಲ್ಯರ ಮಗಳು ಕುಮಾರಿ ಕೀರ್ತನಾ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಧನ್ಯವಾದವಿತ್ತರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English